ಚಾಮರಾಜನಗರ: ಮತದಾರರ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ವಿರೋಧಿಸಿ ಎಸ್.ಐ.ಆರ್ ವಿರೋಧಿ ಜಾತ್ಯಾತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೇ 30 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸದಸ್ಯ ಕೆ.ವೆಂಕಟರಾಜು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ ಎಸ್.ಐ.ಆರ್ ಮೂಲಕ ಜನರ ಮತದಾನದ ಹಕ್ಕನ್ನು ಕಸಿಯಲು ಮುಂದಾಗಿದೆ. ಈಗಾಗಲೇ 13 ರಾಜ್ಯಗಳಲ್ಲಿ ಎಸ್.ಐ.ಆರ್ ನಡೆಸಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದೆ. ಈ ನಿಟ್ಟಿನಲ್ಲಿ ಎಸ್.ಐ.ಆರ್ ವಿರೋಧಿಸಿ ಮೇ 30 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನ ವಿರೋಧಿ [SIR] ಅನ್ನು ನಿಲ್ಲಿಸಬೇಕು. ಜನಸ್ನೇಹಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಜಾರಿಗೆ ತರಬೇಕು. ಯಾವುದೇ ಕಾರಣಕ್ಕೂ ‘ಲಾಜಿಕಲ್ ಡಿಸ್ಕಿ ಪೆನ್ಸಿ’ ಎಂಬ ಸಾಫ್ಟ್ ವೇರ್ ಬಳಸಬಾರದು. ಕೋಟ್ಯಾಂತರ ಜನರು ಅಲೆದಾಡುವಂತೆ ಆಗಿದ್ದ, 27 ಲಕ್ಷ ಜನ ಎಲ್ಲಾ ದಾಖಲೆಗಳಿದ್ದರೂ ಮತದಾನದ ಹಕ್ಕನ್ನು ಕಳೆದುಕೊಂಡದ್ದು ಇದರಿಂದ ಇದಕ್ಕೆ ಕರ್ನಾಟಕದಲ್ಲಿ ಅವಕಾಶ ಇರಬಾರದು.
ಮತದಾರರ ಪಟ್ಟಿಯನ್ನು ಕಡ್ಡಾಯವಾಗಿ ಮೆಷಿನ್ ರೀಡಬಲ್ ಘಾರ್ಮ್ಯಾಟಿನಲ್ಲಿ ನೀಡಬೇಕು. ಯಾರನ್ನು ತೆಗೆಯಲಾಗಿದೆ, ಯಾರನ್ನು ಸೇರಿಸಲಾಗಿದೆ ಎಂಬುದು ಪಾರದರ್ಶಕವಾಗಿ ಪರಿಶೀಲನೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕರಡು ಪಟ್ಟಿ ತಯಾರಾದ ಮೇಲೆ ಕಡ್ಡಾಯವಾಗಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕರೆದು ಅದರಲ್ಲಿ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಮುಕ್ತವಾಗಿ ತಿದ್ದುಪಡಿಗಳನ್ನು ಸಂಗ್ರಹಿಸಿದ ನಂತರವೇ ಅಂತಿಮಗೊಳಿಸಬೇಕು. ಜನ ದುಡಿಯಲು ದೂರದ ಊರುಗಳಿಗೆ ಹೋಗಿರುವುದರಿಂದ, ಕೂಡಲೇ ದಾಖಲೆಗಳನ್ನು ಪಡೆಯುವುದು ಸುಲಭ ಇಲ್ಲದಿರುವುದರಿಂದ ಅಪೀಲ್ ಮತ್ತು ಪರಿಶೀಲನೆಗೆ ಕನಿಷ್ಠ 6 ತಿಂಗಳ ಸಮಯವಕಾಶ ಇರಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಮೊಹಮ್ಮದ್ ಅಸ್ಗರ್ ಮುನ್ನಾ, ಅಬ್ರಾರ್ ಅಹಮ್ಮದ್, ಮಹೇಶ್ ಗಾಳೀಪುರ ಹಾಜರಿದ್ದರು.