ಚಾಮರಾಜನಗರ: ಮಕ್ಕಳು ರಂಗಗೀತೆಗಳನ್ನು ಹಾಡುತ್ತಿದ್ದರೇ, ಹಿರಿಯ ರಂಗಕರ್ಮಿಗಳು, ಪೋಷಕರು ಹಾಗೂ ಪ್ರೇಕ್ಷಕರು ತಲೆದೂಗಿದರು. ವಿವಿಧ ತಿಂಡಿ-ತಿನಿಸುಗಳನ್ನು ಪುಟಾಣಿ ಮಕ್ಕಳು ಮಾರಾಟ ಮಾಡಿ ಮಕ್ಕಳ ಸಂತೆಗೆ ಮೆರುಗು ತಂದರು.
ನಗರದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ಹಟ್ಟಿ ಹೈಕಳ ಜಗುಲಿ” ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಗಮನ ಸೆಳೆದ ರೀತಿ ಇದಾಗಿತ್ತು. ಅವರು ತಾಳಕ್ಕೆ ತಕ್ಕಂತೆ ರಂಗಗೀತೆಗಳಿಗೆ ಧ್ವನಿಯಾಗುತ್ತಿರುವುದನ್ನು ನೋಡುವುದೇ ಒಂದು ಸೊಗಸು ಎಂಬುದನ್ನು ಹಿರಿಯ ರಂಗಕರ್ಮಿಗಳ ಕಂಗಳು ಹೇಳುತ್ತಿತ್ತು. ಆಟದ ಜೊತೆಗೆ ಪಾಠವನ್ನು ಕಲಿಸುವ ಬೇಸಿಗೆ ಶಿಬಿರಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗಿದೆ ಎಂದು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಾಯಣ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ) ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ. ದೊಡ್ಡವರು ಮುಗ್ಧತೆಯನ್ನು ಕಳೆದುಕೊಂಡಿದ್ದು, ಪರಿಪೂರ್ಣ ಮಾಣಿಕ್ಯಗಳಾದ ಮಕ್ಕಳನ್ನು ಸೂಕ್ಷ್ಮತೆಯಿಂದ ಗಮನಿಸಿ ಅವರಿಗೆ ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡಬೇಕಿದೆ ಎಂದರು.
ಈ ಭಾಗದ ಶ್ರೀ ಮಂಟೇಸ್ವಾಮಿ, ಶ್ರೀ ಮಹದೇಶ್ವರ ಜಗತ್ತಿನ ಸಾಂಸ್ಕೃತಿಕ, ಸತ್ಯ ಮತ್ತು ಸಮಾನತೆಯ ಪ್ರಜ್ಞೆಯಾಗಿದ್ದಾರೆ. ಮುಗ್ಧತೆ ಇದ್ದ ಕಡೆ ಸತ್ಯ ಮತ್ತು ಸಂಸ್ಕೃತಿ ಇರುತ್ತದೆ. ಮಕ್ಕಳು ಮುಕ್ತವಾದ ದೀವಿಗೆಯಾಗಿದ್ದಾರೆ. ಅವರ ವಿಚಾರದಲ್ಲಿ ದೋಷ ಮಾಡಬಾರದು. ನಮ್ಮ ಹಿರಿಯರಿಂದ ನಡೆ, ನುಡಿ, ಸಂಸ್ಕೃತಿ ಮತ್ತು ಸಂಬಂಧವನ್ನು ಕಲಿತುಕೊಂಡಿದ್ದೇವೆ. ಆದರೆ ಸಮಾಜದಲ್ಲಿ ಇಂದು ಯುದ್ಧ, ಜಗಳವೇ ಪ್ರಧಾನವಾಗಿರುವುದರಿಂದ ಭವಿಷ್ಯದ ಕುರಿತು ಆತಂಕವಾಗುತ್ತಿದೆ ಎಂದು ತಿಳಿಸಿದರು.
ಚೇತನವೊಂದೆ ಮನುಷ್ಯನಿಗೆ ಸದೃಢವಾದ ಆಯುಧವಾಗಿದೆ. ಅಂತಹ ಚೇತನಗಳು ಉಳಿಯಬೇಕಾದರೇ ಮಕ್ಕಳೊಂದಿಗೆ ನಾವು ಬದುಕುವುದನ್ನು ಕಲಿಯಬೇಕು. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕಿದೆ. ಕಿರಣ್ ಗಿರ್ಗಿ ಅತ್ಯಂತ ಬದ್ಧತೆ ಮತ್ತು ಶಿಸ್ತಿನಿಂದ ಶಿಬಿರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜವಳಿ ವರ್ತಕರ ಸಂಘದ ಅಧ್ಯಕ್ಷ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ, ಸಾಹಿತಿ ಮತ್ತು ಸಂಶೋಧಕರಾದ ಪಿ.ನಾಗರತ್ನಮ್ಮ ಮಳವಳ್ಳಿ, ಬೆಂಗಳೂರು ಅಬಕಾರಿ ಅಧೀಕ್ಷಕ ಎಸ್.ಎಂ.ಮಹೇಶ, ಪ್ರಾಧಿಕಾರ ಸದಸ್ಯ ಎಸ್.ರಾಜು, ಉದ್ಯಮಿ ಸಿ.ಕಾಂತರಾಜ್, ನವೋದಯ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಎಸ್.ಎಸ್.ಮೋಹನ್ ಕುಮಾರ್, ಹಿರಿಯ ಸಂಗೀತ ವಿದ್ವಾಂಸ ಕಿರಗಸೂರು ರಾಜಪ್ಪ, ವಿದ್ವಾನ್ ರಘುನಾಥ್, ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ, ಶಿಬಿರದ ಸಂಚಾಲಕಿ ನಂದಿನಿ ರವಿಕುಮಾರ್ ಹಾಗೂ ಇತರರು ಹಾಜರಿದ್ದರು.