ಬೆಂಗಳೂರು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದ (596) ಮತ್ತು ಉಳಿದ ಮೂಲ ವೃಂದಗಳಿಗೆ ಒಟ್ಟು3,995 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಆಕಾಂಕ್ಷಿಗಳಾಗಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಒಳಮೀಸಲಾತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಗ್ಯಾರಂಟಿ ಸರ್ಕಾರವು ಕೊಟ್ಟ ಮಾತಿನಂತೆ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ತೀರ್ಮಾನಿಸಿದ ರೋಸ್ಟರ್ ಬಿಂದುಗಳಿಗೆ ಅನುಸಾರ ನೇಮಕಾತಿ ನಡೆಸಲಾಗುತ್ತಿದೆ. ಇದರಿಂದ ಎಲ್ಲ ಸಮುದಾಯಗಳಿಗೆ ನ್ಯಾಯಯುತ ಅವಕಾಶ ದೊರಕಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಯುವಜನರು ತಮ್ಮ ನಿರೀಕ್ಷೆ, ಅರ್ಹತೆಗಳಿಗೆ ಅನುಗುಣವಾದ ಉದ್ಯೋಗ ಪಡೆಯಬೇಕು. ನಿರುದ್ಯೋಗ ನಿವಾರಣೆಯಾಗಬೇಕು ಮತ್ತು ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕು ಎನ್ನುವುದು ಸರ್ಕಾರದ ಆಶಯ. ಈ ನೇಮಕಾತಿಯು ಅಧಿಸೂಚನೆಯು ಯುವಜನರ ಭವಿಷ್ಯ ಹಾಗೂ ಉದ್ಯೋಗದ ಕುರಿತಾದ ಕಾಂಗ್ರೆಸ್ ಪಕ್ಷ ಹಾಗೂ ಗ್ಯಾರಂಟಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.