ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ರಾಜ್ಯದ ಉಪ್ಪಾರ ಸಮುದಾಯದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಿ.ಎ.ಎಲ್.ಡಿ ಬ್ಯಾಂಕ್ ನಿರ್ದೇಶಕ ಹೊನ್ನೂರು ಸಿದ್ದಪ್ಪಸ್ವಾಮಿ ಆಗ್ರಹಿಸಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರು ರಾಜ್ಯದ ಏಕೈಕ ಉಪ್ಪಾರ ಸಮುದಾಯದ ಶಾಸಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರೂ ಆಗಿರುವ ಪುಟ್ಟರಂಗಶೆಟ್ಟಿ ಅವರು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಮಂಡಲ ಪಂಚಾಯಿತಿಯಿಂದ ಶಾಸಕ ಸ್ಥಾನದವರೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಮೈಸೂರು-ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಸೇವೆಯನ್ನು ಗುರುತಿಸಿ, ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮುದಾಯದ ಮುಖಂಡರಾದ ಸಿದ್ದಪ್ಪ ಸ್ವಾಮಿ, ಗುರುಲಿಂಗಯ್ಯ, ಮಹದೇವಸ್ವಾಮಿ, ಎಂ.ಸೋಮಣ್ಣ, ಮರಿಲಿಂಗ, ಧನರಾಜು, ಆನಂದ, ಬಾಲು ಪ್ರಸಾದ್ ಹಾಜರಿದ್ದರು.

Share this Article
Leave a comment