ಕರಾಚಿ/ನವದೆಹಲಿ: ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ತಾಂತ್ರಿಕ ದೋಷದಿಂದಾಗಿ ಅಪಾಯಕ್ಕೆ ಸಿಲುಕಿದ್ದ ಭಾರತೀಯ ಸರಕು ಸಾಗಣೆ ಹಡಗೊಂದನ್ನು ಪಾಕಿಸ್ತಾನದ ನೌಕಾಪಡೆ ಯಶಸ್ವಿಯಾಗಿ ರಕ್ಷಿಸಿದೆ. ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ನೌಕಾಪಡೆ ಕೈಗೊಂಡ ಈ ಕ್ರಮವು ಅಂತರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿದೆ.
ಭಾರತೀಯ ಹಡಗು ‘ಎಂವಿ ಕಾವೇರಿ’ ಅರಬ್ಬಿ ಸಮುದ್ರದ ಮೂಲಕ ಚಲಿಸುತ್ತಿದ್ದಾಗ ಹಡಗಿನ ಇಂಜಿನ್‌ನಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಸಮುದ್ರದ ಮಧ್ಯದಲ್ಲಿ ಹಡಗು ನಿಯಂತ್ರಣ ತಪ್ಪಿ ಮುಳುಗುವ ಭೀತಿ ಎದುರಾದಾಗ, ಹಡಗಿನ ಸಿಬ್ಬಂದಿ ತುರ್ತು ರಕ್ಷಣಾ ಸಂದೇಶ (SOS Message) ರವಾನಿಸಿದ್ದರು. ಸಮೀಪದಲ್ಲೇ ಗಸ್ತು ತಿರುಗುತ್ತಿದ್ದ ಪಾಕಿಸ್ತಾನ ನೌಕಾಪಡೆಯ ‘ಪಿಎನ್‌ಎಸ್ ಅಸ್ಲಾತ್’ ಯುದ್ಧನೌಕೆಯು ಈ ಸಂದೇಶವನ್ನು ಸ್ವೀಕರಿಸಿ ತಕ್ಷಣವೇ ಸ್ಥಳಕ್ಕೆ ಧಾವಿಸಿತು.
ಪಾಕಿಸ್ತಾನದ ನೌಕಾ ಸಿಬ್ಬಂದಿ ಮತ್ತು ಎಂಜಿನಿಯರ್‌ಗಳು ಭಾರತೀಯ ಹಡಗನ್ನು ಸಂಪರ್ಕಿಸಿ, ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ನೆರವು ಮತ್ತು ಆಹಾರವನ್ನು ಒದಗಿಸಿದರು. ಹಡಗಿನ ಇಂಜಿನ್ ದೋಷವನ್ನು ಸರಿಪಡಿಸಲು ಪಾಕಿಸ್ತಾನಿ ಎಂಜಿನಿಯರ್‌ಗಳು ನೆರವು ನೀಡಿದ್ದಲ್ಲದೆ, ಹಡಗು ಸುರಕ್ಷಿತವಾಗಿ ಚಲಿಸುವವರೆಗೂ ಅದರ ಜೊತೆಯಲ್ಲೇ ಇದ್ದು ಮಾರ್ಗದರ್ಶನ ನೀಡಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಘರ್ಷಗಳ ಹೊರತಾಗಿಯೂ, ಸಮುದ್ರದ ಭದ್ರತೆ ಮತ್ತು ಮಾನವ ಜೀವಗಳ ರಕ್ಷಣೆಯ ಅಂತರಾಷ್ಟ್ರೀಯ ನಿಯಮದಂತೆ (SOLAS) ಪಾಕಿಸ್ತಾನ ಈ ನೆರವು ನೀಡಿದೆ. ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಪಾಕಿಸ್ತಾನ ನೌಕಾಪಡೆಯ ಸಕಾಲಿಕ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆ ನೋಡಿದರೆ ಈ ಹಿಂದೆಯೂ ಭಾರತೀಯ ನೌಕಾಪಡೆ ಪಾಕಿಸ್ತಾನಿ ಹಡಗುಗಳನ್ನು ರಕ್ಷಣೆ ಮಾಡಿತ್ತು ಎಂಬುದು ಗಮನಾರ್ಹ.