ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಬಳಿಕ, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೊದಲ ಹಂತದ ಸಚಿವ ಸಂಪುಟದ ಸಂಭಾವ್ಯ ಪಟ್ಟಿ ಬಹಿರಂಗವಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ (ಬುಧವಾರ) ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 10 ರಿಂದ 14 ಸಚಿವರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯು.ಟಿ. ಖಾದರ್, ಸತೀಶ್ ಜಾರಕಿಹೊಳಿ ಡಾ. ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ ಅಥವಾ ಭೈರತಿ ಸುರೇಶ್ ಹೆಸರುಗಳು ಅಂತಿಮವಾಗಿದೆ. ಜಮೀರ್ ಅಹಮದ್ ಖಾನ್, ದಿನೇಶ್ ಗುಂಡು ರಾವ್, ರೂಪಾ ಶಶಿಧರ್, ಎನ್.ಎ. ಹ್ಯಾರಿಸ್, ಆರ್. ಚಲುವರಾಯಸ್ವಾಮಿ ಹೆಸರುಗಳೂ ಕೂಡ ಚರ್ಚೆಯಲ್ಲಿವೆ.
ಹೊಸಬರಲ್ಲಿ ಬಿ.ಕೆ. ಹರಿಪ್ರಸಾದ್, ರೂಪಾ ಶಶಿಧರ್, ಸಲೀಂ ಅಹ್ಮದ್, ಯು.ಟಿ. ಖಾದರ್, ಆರ್.ವಿ. ದೇಶಪಾಂಡೆ, ಟಿ.ಬಿ.ಜಯಚಂದ್ರ ಅವರ ಹೆಸರುಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜಂಟಿಯಾಗಿ ಮೊದಲ ಹಂತದ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕಾಂಗ್ರೆಸ್ ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ.
ಜಿಲ್ಲೆಗೆ ಸಚಿವ ಸ್ಥಾನ ಕುತೂಹಲ: ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಕೊಳ್ಳೇಗಾಲ ಕ್ಷೇತ್ರದ ಎ.ಆರ್.ಕೃಷ್ಣಮೂರ್ತಿ ಮತ್ತು ಚಾಮರಾಜನಗರ ಕ್ಷೇತ್ರದ ಪುಟ್ಟರಂಗಶೆಟ್ಟಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಇಬ್ಬರ ಹೆಸರುಗಳು ಕೇಳಿಬರುತ್ತಿದ್ದು, ಅಂತಿಮ ಪಟ್ಟಿಯಲ್ಲಿ ಪುಟ್ಟರಂಗಶೆಟ್ಟಿ ಅವರ ಹೆಸರು ಚರ್ಚೆಯಾಗುತ್ತಿದೆ. ಆದರೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಘಟಾನುಘಟಿ ನಾಯಕರು ತೆರೆಮರೆಯಲ್ಲಿ ಅಂತಿಮ ಪ್ರಯತ್ನ ನಡೆಸುತ್ತಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಲೇ ಇದೆ. ಒಂದು ವೇಳೆ ಜಿಲ್ಲೆಯನ್ನು ಪರಿಗಣಿಸಿದ್ದೇ ಆದರೇ ಎಸ್ಸಿ ಕೋಟಾದಡಿಯಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಸಚಿವ ಸ್ಥಾನ ಪಡೆಯಬಹುದು ಎಂಬ ಚರ್ಚೆ ಜೋರಾಗಿದೆ.