ಸಿಮ್ಸ್ ನಲ್ಲಿ ಗರ್ಭಿಣಿ ಸಾವು, ವೈದ್ಯರ ಅಮಾನತ್ತು ಮಾಡುವಂತೆ ಪ್ರತಿಭಟನೆ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಸಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಇತ್ತೀಚೆಗೆ ರೂಪಾ ಎಂಬ ಗರ್ಭಿಣಿ ಮೃತಪಟ್ಟ ಹಿನ್ನೆಲೆಯಲ್ಲಿ, ತಪ್ಪಿತಸ್ಥ ವೈದ್ಯರ ಅಮಾನತ್ತು ಮಾಡುವಂತೆ ಒತ್ತಾಯಿಸಿ ಮಂಗಳವಾರ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ಪ್ರತಿಭಟನಾಕಾರರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಮುಖಂಡ ಹ.ರಾ.ಮಹೇಶ್ ಮಾತನಾಡಿ, ಅಗ್ರಹಾರ ಗ್ರಾಮದ ಸುರೇಶ್ ಅವರ ಪತ್ನಿ ರೂಪಾ ಅವರು ಕಳೆದ 9 ತಿಂಗಳಿಂದ ಸ್ತ್ರೀರೋಗ ತಜ್ಞೆ ಡಾ.ಭಾರತಿ ಅವರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೇ 3 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಯಿ-ಮಕ್ಕಳ ವಿಭಾಗಕ್ಕೆ ದಾಖಲಾಗಿದ್ದರು. ಈ ವೇಳೆ ಡಾ.ಭಾರತಿ ಅವರು ಗರ್ಭಿಣಿ ರೂಪಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದೆ ನಿರ್ಲಕ್ಷ್ಯ ವಹಿಸಿದ ಕಾರಣದಿಂದ ರೂಪಾ ಅವರು ಮೃತಪಟ್ಟಿದ್ದಾರೆ ಎಂದು ದೂರಿದರು.

ಹೆರಿಗೆಯ ಸಂದರ್ಭದಲ್ಲಿ ಡಾ.ಕೌಶಲ್ಯ ಅವರು ರೂಪಾ ಅವರ ಕುಟುಂಬದವರಿಗೆ 5 ಸಾವಿರ ರೂ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಗರ್ಭಿಣಿಗೆ ಮಾನಸಿಕವಾಗಿಯೂ ಹಿಂಸೆಯನ್ನು ನೀಡಿದ್ದಾರೆ. ಅದಲ್ಲದೇ ವೈದ್ಯರು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯ ಹೊಟ್ಟೆಯನ್ನು ಜೋರಾಗಿ ಒತ್ತಲಾಗಿ ರೂಪಾ ಅವರು ಮೃತಪಟ್ಟಿದ್ದಾರೆ. ಇದೊಂದು ಅಸಹಜವಾದ ಸಾವಾಗದೇ ಇದು ಗರ್ಭಿಣಿಯ ಕೊಲೆಯಾಗಿದೆ ಎಂದು ಆರೋಪಿಸಿದರು.

ಮುಖಂಡ ವಾಸು ಹೊಂಡರಬಾಳು ಮಾತನಾಡಿ, ಸಿಮ್ಸ್ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಇತ್ತೀಚೆಗೆ ಗರ್ಭಿಣಿ ಮತ್ತು ಮಗು ಮೃತಪಟ್ಟಿದ್ದರು‌. ಅದಾಗ್ಯೂ ಮತ್ತೊಂದು ಗರ್ಭಿಣಿ ಸಾವು ಸಂಭವಿಸಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ವೈದ್ಯರ ಮೇಲೆ ಕಠಿಣ ಕ್ರಣವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಹಲವಾರು ಮುಖಂಡರು ಭಾಗವಹಿಸಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಅವರು ಭೇಟಿನೀಡಿ ಪ್ರತಿಭಟನಾಕಾರರ ಹಕ್ಕೊತ್ತಾಯಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗರ್ಭಿಣಿ ರೂಪಾ ಅವರು ಮೃತಪಟ್ಟಿರುವುದು ವಿಷಾದನೀಯ. ಈ ಪ್ರಕರಣದ ಸಂಬಂಧ ಈಗಾಗಲೇ ವಿಚಾರಣೆ ನಡೆಸುತ್ತಿದ್ದು, ಮೈಸೂರು ವೈದ್ಯಕೀಯ ಕಾಲೇಜಿನ ವೈದ್ಯರ ನೇತೃತ್ವದಲ್ಲಿ ಮತ್ತೊಂದು ಉನ್ನತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಡಾ.ಭಾರತಿ ಅವರು ಕಡ್ಡಾಯದ ರಜೆ ಮೇಲೆ ತೆರಳಿದ್ದು, ತನಿಖೆಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು: ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರು ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾದರು. ಈ ವೇಳೆ ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ಸ್ಥಳಕ್ಕೆ ಭೇಟಿ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀ ರೂಪಾ ಅವರಿಗೆ ಮೃತ ರೂಪಾ ಅವರ ತಾಯಿ ಮನವಿ ಪತ್ರವನ್ನು ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಶ್ರೀ ರೂಪಾ ಮಾತನಾಡಿ, ಪ್ರಕರಣದ ಭಾಗವಾಗಿರುವ ಮೂವರು ವೈದ್ಯರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಈ ಪ್ರಕರಣದ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

 

Share this Article
Leave a comment