ಚಾಮರಾಜನಗರ: ನಗರಗಳು ಹಾಗೂ ಪಟ್ಟಣಗಳು, ಗ್ರಾಮೀಣ ಪ್ರದೇಶಗಳ ಕೊಳೆಯನ್ನು ಬಾಚಿ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಚಾಮರಾಜನಗರದಲ್ಲಿ ಇಂತಹ ಶ್ರೇಷ್ಠ ವೃತ್ತಿ ಮಾಡುತ್ತಿರುವ ಸ್ವಚ್ಛತಾ ರಾಯಭಾರಿಗಳ ಕೈಯಿಂದ ಸಮಾಜದ ಕೊಳೆಯನ್ನು ತೊಳೆಯಲು ಉದಯಿಸಿರುವ “ಜನತಾ ರಾಯಭಾರಿ” ವೆಬ್ ಸೈಟ್ ಮಾಧ್ಯಮ ಮಂಗಳವಾರ ಪ್ರಾಯೋಗಿಕವಾಗಿ ಚಾಲನೆಯಾಯಿತು.
ನಗರದ ರಥದ ಬೀದಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದ ಚಾಮರಾಜನಗರ ನಗರಸಭೆಯ ಪೌರ ಕಾರ್ಮಿಕರಾದ ಆನಂದ್, ಎಸ್.ವಿಜಯ್ ಟಿವಿ ಮತ್ತು ಪತ್ರಿಕೆ, ಮೊಬೈಲ್ ಗಳಲ್ಲಿ ನ್ಯೂಸ್ ನೋಡುವ ನಾವು ಇಂದು ಒಂದು ನ್ಯೂಸ್ ವೆಬ್ ಸೈಟ್ ಗೆ ಚಾಲನೆ ಕೊಟ್ಟಿರುವುದು ಖುಷಿಯಾಗಿದೆ. ಜನತಾ ರಾಯಭಾರಿ ಹೆಸರಿನ ನ್ಯೂಸ್ ವೆಬ್ ಸೈಟ್ ಪೌರ ಕಾರ್ಮಿಕರ ಕರ್ತವ್ಯದಲ್ಲಿರುವ ಬದ್ಧತೆ, ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ, ಛಲವನ್ನು ಅಳವಡಿಸಿಕೊಂಡು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ನಾವು ಪೌರಕಾರ್ಮಿಕರು ನಿತ್ಯವೂ ಕಸವನ್ನು ವಿಲೇವಾರಿ ಮಾಡಿ ನಗರವನ್ನು ಸ್ವಚ್ಛಗೊಳಿಸುವಂತೆ , ಜನತಾ ರಾಯಭಾರಿ ಮಾಧ್ಯಮ ಸಮಾಜದ ಕೊಳೆಯನ್ನು ತೊಳೆಯಲಿ ಎಂದು ನಗರಸಭೆ ಪೌರಕಾರ್ಮಿಕ ಆನಂದ್ ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಾಗಿ ನಾನು ಸೇವೆ ಸಲ್ಲಿಸುತ್ತಿದ್ದು, ಜನರು ನಮ್ಮನ್ನು ಕಸವನ್ನು ವಿಲೇವಾರಿ ಮಾಡಲು ಇರುವವರು ಎಂದುಕೊಂಡಿದ್ದಾರೆ. ಎಷ್ಟೋ ಜನರು ನಾವು ಮನುಷ್ಯರು ಎಂಬುದನ್ನೇ ಮರೆತವರಂತೆ ನಡೆದುಕೊಂಡು ಬಿಡುತ್ತಾರೆ. ಆದರೆ ನನ್ನಂತವರಿಂದ ಒಂದು ಸುದ್ದಿ ಮಾಧ್ಯಮಕ್ಕೆ ಚಾಲನೆ ನೀಡುತ್ತಿರುವುದು ನಿಜಕ್ಕೂ ಖುಷಿ ನೀಡಿದೆ ಎಂದರು.
ನಾವು ನಿತ್ಯವೂ ರಸ್ತೆಗಳಲ್ಲಿ ಕಸ ಗುಡಿಸುವಾಗ, ವಿವಿಧ ಬಡಾವಣೆಗಳಲ್ಲಿ ಗಬ್ಬು ನಾರುವ ಕಸವನ್ನು ಸಂಗ್ರಹಿಸುವಾಗ ಆರೋಗ್ಯವನ್ನು ಲೆಕ್ಕಿಸದೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಅದರಂತೆ “ಜನತಾ ರಾಯಭಾರಿ” ವೆಬ್ ಸೈಟ್ ಮಾಧ್ಯಮ ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ, ಜನ ವಿರೋಧಿ ನಿಲುವು, ಅನ್ಯಾಯ, ಅಕ್ರಮಗಳ ವಿರುದ್ಧ ನಿರಂತರವಾಗಿ ವರದಿಯನ್ನು ಮಾಡಬೇಕು. ಈ ಮೂಲಕ ಸಮಾಜದ ಕೊಳೆಯನ್ನು ತೊಳೆಯುವಂತಾಗಬೇಕು ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮಂತವರು ಕೂಡ ಮೊಬೈಲ್ ಬಳಕೆಯಲ್ಲಿ ಮುಳುಗಿ ಹೋಗಿದ್ದೇವೆ. ಮೊಬೈಲ್ ನಲ್ಲಿ ಬರುವ ಸುದ್ದಿಗಳನ್ನು ನಾನು ಸಹ ಓದುತ್ತೇನೆ. ವೆಬ್ ಸೈಟ್ ಮೂಲಕ ನಮ್ಮ ಚಾಮರಾಜನಗರವನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಸುದ್ದಿಗಳನ್ನು ನೀಡುತ್ತಿರುವುದು ನಮ್ಮಂತವರಿಗೂ ಅನುಕೂಲವಾಗುತ್ತದೆ. ಜನತಾ ರಾಯಭಾರಿ ಮಾಧ್ಯಮ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದರು.
ಮತ್ತೋರ್ವ ಪೌರಕಾರ್ಮಿಕ ಎಸ್.ವಿಜಯ್ ಮಾತನಾಡಿ, ಹಲವಾರು ಬಾರಿ ಪೌರಕಾರ್ಮಿಕರಿಗೆ ಸಮಸ್ಯೆಗಳು ಉಂಟಾದಾಗ ಮಾಧ್ಯಮಗಳು ನಮ್ಮ ಪರವಾಗಿ ವರದಿಯನ್ನು ಮಾಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಾದ ಪೌರಕಾರ್ಮಿಕರು ಇಂದಿಗೂ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜನತಾ ರಾಯಭಾರಿ ವೆಬ್ ಸೈಟ್ ಮಾಧ್ಯಮ ಪೌರಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಲಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.