ಚಾಮರಾಜನಗರ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣ ಪಡೆಯುವುದು ಅತ್ಯಗತ್ಯ, ಶಿಕ್ಷಣ ದುಡಿಮೆಗೆ ದಾರಿಮಾಡಿಕೊಡುತ್ತದೆ ಎಂದು ಹಿರಿಯ ಉಪನ್ಯಾಸಕರಾದ ಎಂ.ದುಂಡಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ತಾಲೂಕಿನ ಚಂದಕವಾಡಿ ಗ್ರಾಮದ ಸರ್ಕಾರಿ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ೨೫ ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ಗುರುಗಳು ಹಾಗೂ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಚಂದಕವಾಡಿ ಪ್ರೌಢ ಶಾಲೆಯಲ್ಲಿ ೨೫ ವರ್ಷಗಳ ಹಿಂದೆ ಓದಿದ ವಿದ್ಯಾರ್ಥಿಗಳು ೨೫ ನೇ ವರ್ಷದ ಬೆಳ್ಳಿಹಬ್ಬ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಸಮಾಜದಲ್ಲಿ ನೊಂದವರು, ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕು. ಹಾಗಾದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಲಿದೆ ಎಂದರು.
ಶಿಕ್ಷಕ ಆರ್.ಮಲ್ಲೇಶ್ ಮಾತನಾಡಿ, ಹಿಂದೆ ಗುರುಗಳು ಹಾಗೂ ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಪ್ರಸ್ತುತ ಸಂದರ್ಭದಲ್ಲಿ ತಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ಕಂಡಾಗ ಮಾತನಾಡಿಸಿ, ಗೌರವ ಕೊಡಬೇಕು ಎಂಬುದೇ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಗಗನ್ ಮೆಡಿಕಲ್ ಮಾಲೀಕ ಶಿವಕುಮಾರ್ ಮಾತನಾಡಿ, ನಮಗೆ ವಿದ್ಯೆ ನೀಡಿದ ಗುರುಗಳನ್ನು ಮರೆಯಬಾರದು ಎಂಬ ದೃಷ್ಟಿಯಿಂದ ನಮ್ಮದೇ ಆದ ಹಿರಿಯ ವಿದ್ಯಾರ್ಥಿಗಳ ಬಳಗ ಸ್ಥಾಪಿಸಿದ್ದೇವೆ. ಎಲ್ಲಾ ಹಿರಿಯ ವಿದ್ಯಾರ್ಥಿಗಳು ಪಾಠ ಹೇಳಿಕೊಟ್ಟ ಗುರುಗಳನ್ನು ಅಭಿನಂದಿಸುವ ಸಲುವಾಗಿ ಸ್ನೇಹ ಸಮ್ಮಿಲನ ಸಮಾರಂಭ ಆಯೋಜನೆ ಮಾಡಿದ್ದೇವೆ. ಮುಂದೆಯೂ ನಮ್ಮ ಬಳಗದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಶಾಲೆಯ ಹಿರಿಯ ಶಿಕ್ಷಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಶಿಕ್ಷಕರಾದ ಬಿ.ಶಿವಕುಮಾರ್, ಉಪನ್ಯಾಸಕ ನಾರಾಯಣಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಮುದ್ದಪ್ಪ, ಪ್ರಾಂಶುಪಾಲ ಚಂದ್ರಶೇಖರ್, ಹಿರಿಯ ವಿದ್ಯಾರ್ಥಿಗಳ ಬಳಗದ ಕುಮಾರಸ್ವಾಮಿ, ನಾರಾಯಣಸ್ವಾಮಿ, ಬಿ.ಟಿ.ಶ್ರೀನಿವಾಸ್, ರಾಜು, ಎಚ್.ಎನ್.ಮಹೇಶ್, ಉಮೇಶ್, ರಾಜೇಶ್, ರಮೇಶ್ ಹಾಜರಿದ್ದರು.