ಅಹಮದಾಬಾದ್: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026ರ ಮಹಾಫೈನಲ್ಗೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 2022 ರ ವಿಜೇತ ಗುಜರಾತ್ ಟೈಟಾನ್ಸ್ ಇಂದು(ಭಾನುವಾರ) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಪ್ರಸ್ತುತ ಆವೃತ್ತಿಯಲ್ಲಿ ಆರ್ಸಿಬಿ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್ಗಳ ಭರ್ಜರಿ ಜಯಸಾಧಿಸಿ ನೇರವಾಗಿ ಫೈನಲ್ಗೆ ಲಗ್ಗೆ ಇಟ್ಟಿತು. ಕಳೆದ ವರ್ಷ ಇದೇ ಮೈದಾನದಲ್ಲಿ ಮೊದಲ ಟ್ರೋಫಿ ಗೆದ್ದಿದ್ದ ಆರ್ಸಿಬಿ, ಈಗ ಸತತ 2ನೇ ಕಪ್ ಮೇಲೆ ಕಣ್ಣಿಟ್ಟಿದೆ. ಮುಂಬೈ, ಚೆನ್ನೈ ನಂತರ ಟೈಟಲ್ ಡಿಫೆಂಡ್ ಮಾಡಿದ 3ನೇ ತಂಡ ಆಗುವ ಅವಕಾಶ ರಜತ್ ಪಾಟಿದಾರ್ ಪಡೆಗೆ ಇದೆ.
ಇನ್ನೂ ಗುಜರಾತ್ ಟೈಟಾನ್ಸ್ 2023 ರ ನಂತರ ಮೊದಲ ಬಾರಿ ಫೈನಲ್ಗೆ ಬಂದಿರುವ ಶುಭಮನ್ ಗಿಲ್ ನೇತೃತ್ವದ ಗುಜರಾತ್, 2022ರಲ್ಲಿ ಇದೇ ಮೈದಾನದಲ್ಲಿ ಚೊಚ್ಚಲ ಟ್ರೋಫಿ ಎತ್ತಿತ್ತು. ಈ ಋತುವಿನಲ್ಲಿ ತವರಿನಲ್ಲಿ 7ರಲ್ಲಿ 5 ಪಂದ್ಯ ಗೆದ್ದು ಬಲಿಷ್ಠವಾಗಿದೆ. ಒಟ್ಟಾರೆ ಆರ್ಸಿಬಿ 5-4 ಮುನ್ನಡೆ ಸಾಧಿಸಿದ್ದು, ಅಹಮದಾಬಾದ್ ಕ್ರೀಡಾಂಗಣದಲ್ಲಿ 1-1 ಸಮಬಲ ಸಾಧಿಸಿದೆ. ಎರಡೂ ತಂಡಗಳ ನಡುವಿನ 9 ಪಂದ್ಯಗಳಲ್ಲಿ 8 ಬಾರಿ ಚೇಸಿಂಗ್ ತಂಡ ಗೆದ್ದಿದ್ದು, ಕ್ವಾಲಿಫೈಯರ್ 1 ಮಾತ್ರ ಇದಕ್ಕೆ ಅಪವಾದವಾಗಿದೆ.
ಪ್ರಮುಖ ಮುಖಾಮುಖಿ: ಕಗಿಸೊ ರಬಾಡ ಕೊಹ್ಲಿಯನ್ನು 5 ಬಾರಿ, ಜೇಸನ್ ಹೋಲ್ಡರ್ 4 ಬಾರಿ ಔಟ್ ಮಾಡಿದ್ದಾರೆ. ರಬಾಡ ಈ ಬಾರಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅದಲ್ಲದೇ ರಶೀದ್, ದೇವದತ್ ಪಡಿಕ್ಕಲ್ ಅವರನ್ನು 5 ಬಾರಿ ಔಟ್ ಮಾಡಿದ್ದಾರೆ. ವೆಂಕಟೇಶ್ ಅಯ್ಯರ್ ಆರ್ಸಿಬಿ ಪರ ನಿರ್ಣಾಯಕ ಕ್ಷಣಗಳಲ್ಲಿ ಮಿಂಚುತ್ತಿರುವುದು ತಂಡಕ್ಕೆ ಆಧಾರವಾಗಲಿದೆ. ಇನ್ನು ಕ್ರೀಡಾಂಗಣದಲ್ಲಿ ಕೆಂಪು ಮಣ್ಣು ಹೆಚ್ಚಿರುವುದರಿಂದ ಬ್ಯಾಟಿಂಗ್ಗೆ ಸ್ವರ್ಗವಾಗಿದೆ. ಬಾಲ್ ನೇರವಾಗಿ ಬ್ಯಾಟ್ಗೆ ಬರಲಿದೆ. ಆಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪಂದ್ಯಕ್ಕೆ ಯಾವುದೇ ಮಳೆ ಅಡ್ಡಿಯಾಗದು ಎಂಬುದು ಕ್ರಿಕೆಟ್ ಪ್ರೇಮಿಗಳ ಸೆಲೆಬ್ರೇಷನ್ ಗೆ ಮತ್ತಷ್ಟು ಹೆಚ್ಚಿಸಿದೆ.
ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸೇರುವ ನಿರೀಕ್ಷೆ ಇದ್ದು, ಟಿಕೆಟ್ ದರ ₹1,000 ರಿಂದ ₹60,000+ ವರೆಗೂ ಇದೆ. ಕಳೆದ ವರ್ಷ ಕಪ್ ಬರ ನೀಗಿಸಿಕೊಂಡ ಆರ್ಸಿಬಿಗೆ ಟೈಟಲ್ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. 2022ರ ಚಾಂಪಿಯನ್ ಗುಜರಾತ್ಗೆ ತವರಿನಲ್ಲಿ ಮತ್ತೊಮ್ಮೆ ಮಿಂಚುವ ಅವಕಾಶ. 73 ಪಂದ್ಯಗಳ ಐಪಿಎಲ್ 2026ರ ರೋಚಕ ಅಂತ್ಯಕ್ಕೆ ಅಹಮದಾಬಾದ್ ಸಾಕ್ಷಿಯಾಗಲಿದೆ.
ಗುಜರಾತ್ ಟೈಟಾನ್ಸ್:ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ಸಾಯಿ ಸುದರ್ಶನ್, ರಶೀದ್ ಖಾನ್, ರಬಾಡ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಹೋಲ್ಡರ್. ಗಾಯದ ಆತಂಕ: ಗಿಲ್ ಕುತ್ತಿಗೆ, ಸಿರಾಜ್ ಭುಜದ ನೋವಿಗೆ ಚಿಕಿತ್ಸೆ ಪಡೆದಿದ್ದರೂ ಫೈನಲ್ಗೆ ಫಿಟ್ ಆಗಿದ್ದಾರೆ.
ಆರ್ಸಿಬಿ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್.
“ಕಪ್ ನಮ್ದೆ ಅಂತೀರಾ ಆರ್ಸಿಬಿ ಫ್ಯಾನ್ಸ್ ಹಾಗಾದರೇ ಕಮೆಂಟ್ ಮಾಡಿ ಆರ್.ಸಿ.ಬಿ ಗೆಲುವಿಗೆ ಹಾರೈಸಿ”