*ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಆಗ್ರಹ
*ರಾಜ್ಯ ಎಸ್.ಸಿ ಮತ್ತು ಎಸ್.ಟಿ ಪತ್ರಿಕಾ ಸಂಪಾದಕರ ಸಂಘವು ಆಯೋಜಿಸಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಈ ಹಿಂದೆ ಎಸ್.ಸಿ, ಎಸ್.ಟಿ ಪತ್ರಕರ್ತರಿಗೆ 40 ಲಕ್ಷ ರೂ. ಸಾಲ ನೀಡಲಾಗುತ್ತಿತ್ತು. ಆದರೆ ಈ ಹಿಂದಿನ ಸರ್ಕಾರ ರದ್ದು ಮಾಡಿದ್ದು, ಈ ಸಾಲ ನೀಡುವ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಮೂಲಕ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಆಗ್ರಹಿಸಿದರು.
ಬೆಂಗಳೂರಿನ ಸರ್ಕಾರಿ ನೌಕರರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ ಮತ್ತು ಎಸ್.ಟಿ ಪತ್ರಿಕಾ ಸಂಪಾದಕರ ಸಂಘವು ಆಯೋಜಿಸಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಡನೆ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ 2001ರಲ್ಲಿ ದಲಿತ ಪತ್ರಕರ್ತರಿಗೆ ವಾರ್ತಾ ಇಲಾಖೆ ಮೂಲಕ ತರಬೇತಿ, ವೃತ್ತಿ ಕೌಶಲ್ಯ ಕಾರ್ಯಾಗಾರ ನಡೆಸುವ ಮೂಲಕ ಪತ್ರಿಕೋದ್ಯಮದಲ್ಲಿ ದಲಿತರ ಸಹಭಾಗಿತ್ವವನ್ನು ನೆಲೆಗೊಳಿಸಲು ಮುಂದಾದ ಮತ್ತು ದಲಿತರ ಸಬಲೀಕರಣಕ್ಕೆ ದುಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನಲ್ಲಿ ಪ್ರತಿವರ್ಷ ಓರ್ವ ಸಾಧಕ ಪತ್ರಕರ್ತರಿಗೆ ರಾಜ್ಯಮಟ್ಟದ ”ದತ್ತಿ ಪ್ರಶಸ್ತಿ” ನೀಡಲು ಒಂದು ಲಕ್ಷ ರೂ. ಗಳ ದತ್ತಿ ನಿಧಿ ನೀಡಲಾಗುವುದು ಎಂದರು.

ದಲಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಕೊಟ್ಟ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ಹೆಸರಿನಲ್ಲಿ “ದತ್ತಿನಿಧಿ ಪ್ರಶಸ್ತಿ”ಯನ್ನು ದಲಿತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬೆಳಕಿಗೆ ತಂದ ಕ್ರಿಯಾಶೀಲ ದಲಿತ ಅಥವಾ ದಲಿತ ಸಂವೇದನೆಯುಳ್ಳ ದಲಿತೇತರ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ನೀಡಲಾಗುವುದು. ಅದಕ್ಕಾಗಿ 1 ಲಕ್ಷ ರೂ. ನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಪತ್ರಿಕೋದ್ಯಮದಲ್ಲಿ ಇಪ್ಪತ್ತು ವರ್ಷ ಪೂರೈಸಿರುವ ಎಸ್.ಸಿ ಹಾಗೂ ಎಸ್.ಟಿ ಪತ್ರಕರ್ತರ ಒಡೆತನದ ಪತ್ರಿಕೆಗಳಿಗೆ ಒಂದು ಪುಟ ಹೆಚ್ಚುವರಿಯಾಗಿ ಜಾಹೀರಾತು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಪತ್ರಿಕೋದ್ಯಮದಲ್ಲಿ (ಮುದ್ರಣ, ದೃಶ್ಯ ಮತ್ತು ಆಧುನಿಕ ಸುದ್ಧಿ ಮಾಧ್ಯಮ) ವೃತ್ತಿಪರವಾಗಿ ಕೆಲಸ ಮಾಡುತ್ತಿರುವ ಪರಿಶಿಷ್ಠ ಜಾತಿ, ಹಿಂದುಳಿದ ವರ್ಗಗಳ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್.ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದಲ್ಲಿ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ನೀಡಲು ಎರಡು ಲಕ್ಷ ರೂಪಾಯಿಗಳ ದತ್ತಿ ನಿಧಿ ನೀಡಲಾಗುತ್ತಿದೆ.

ಇಂದಿನ ಕಾಲದಲ್ಲಿ ಪತ್ರಿಕೆಗಳನ್ನ ನಡೆಸುವುದು ಬಹಳ ಕಷ್ಟವಾಗಿದೆ. ಪತ್ರಿಕೆ ನಡೆಸುವ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗದವರಿಗೆ ದಮನಿತರ ಸಮಾಜದ ಸುದ್ದಿ ಹಾಕಬೇಕು ಎಂಬ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ಅವರೆಲ್ಲರಿಗೂ ಆದ್ಯತೆ ನೀಡಬೇಕಾಗುತ್ತದೆ ಎಂದರು.
ಯಾವುದೋ ಒಂದು ಸಮುದಾಯಕ್ಕೆ, ಪಂಗಡಕ್ಕೆ ಪತ್ರಿಕೆ ಮಾಡಲು ಆಗುವುದಿಲ್ಲ. ರಾಜಕೀಯ ಪಕ್ಷಗಳ ಮುಖವಾಣಿಗಳಾಗಿ ಕೆಲವು ಪತ್ರಿಕೆಗಳು ಬರುತ್ತಿವೆ. ಈ ರೀತಿ ಮಾಧ್ಯಮಗಳು ಆಗಬಾರದು. ಎಸ್.ಸಿ, ಎಸ್.ಟಿ ಸಮುದಾಯದ ಹಕ್ಕುಗಳ ಬಗ್ಗೆ, ಇವರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಇವರ ಮೇಲಾಗುವ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳ ಹೆಚ್ಚು ಪರಿಣಾಮ ಬೀರಿದರೇ ತಳ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದರು.
ಮಾಜಿ ಸಚಿವರು ಹಾಗೂ ಹಿರಿಯ ಶಾಸಕರಾದ ಕೆ.ವೆಂಕಟೇಶ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೇಷಾ ಖಾನಂ, ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮದನಗೌಡ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಎಸ್.ಸಿ, ಎಸ್.ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜು ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.