ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ : ಮಹಮದ್ ಅಸ್ಗರ್

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಅಕ್ಟೋಬರ್ 27:  ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯುವಂತೆ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನ ಅವರು ಸಲಹೆ ಮಾಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಡೆದ ಎರಡು ದಿನಗಳ ಜಿಲ್ಲಾಮಟ್ಟದ 14/ ರಿಂದ 17ರ ವಯೋಮಾನದ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.

ಎಲ್ಲ ಮಕ್ಕಳು ಕ್ರೀಡಾಕೂಟದಲ್ಲಿ ಗೆಲ್ಲುವ ಮನೋಭಾವದಿಂದ ಭಾಗವಹಿಸುತ್ತಾರೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧರಾಗಿ ಫಲಿತಾಂಶವನ್ನು ಸ್ವೀಕರಿಸಬೇಕು. ಇಂದಿನ ಸೋಲು ನಾಳೆಯ ಗೆಲುವಾಗಬೇಕು. ಜಿಲ್ಲಾಮಟ್ಟ ಕ್ರೀಡಾಕೂಟದ ವಿಜೇತರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ, ಯಶಸ್ಸು ತರುವಂತೆ ಮಹಮದ್ ಅಸ್ಗರ್ ಮುನ್ನ ಅವರು ತಿಳಿಸಿದರು.

ಕ್ರೀಡಾ ಜ್ಯೋತಿ ಸ್ವೀಕರಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಅಥ್ಲೆಟಿಕ್ ಕ್ರೀಡಾಕೂಟವನ್ನು ಪ್ರತಿವರ್ಷ ನಡೆಸಲಾಗುತ್ತದೆ. ಹೋಬಳಿ ಹಾಗೂ ತಾಲೂಕುಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡೆಗಳನ್ನು ನಡೆಸಿ ಜಿಲ್ಲಾಮಟ್ಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದೆ. ಶಿಕ್ಷಣವೆಂದರೆ ಓದುವುದು, ಬರೆಯುವುದು, ಉತ್ತಮ ಅಂಕಗಳಿಕೆ ಮಾತ್ರವಲ್ಲ. ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಶಿಕ್ಷಣದ ಭಾಗವಾಗಿವೆ ಎಂದರು.

ಕ್ರೀಡೆ ಕೇವಲ ಗೆಲುವಿಗಾಗಿ ಅಲ್ಲ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮಗೊಳ್ಳಲು ಕ್ರೀಡೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ಸಹೋದರತ್ವ ರೂಢಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಜಿಲ್ಲೆ ಜಾನಪದ ಕಲೆಗೆ ಹೆಸರುವಾಸಿಯಾಗಿರುವಂತೆ ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಚಂದ್ರಪಾಟೀಲ್ ಅವರು ತಿಳಿಸಿದರು.

ಇದೇ ವೇಳೆ ಶೂಟಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಯುಕ್ತ ಚೇತನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ್‍ಪ್ರಸಾದ್, ಪ್ರೌಢಶಾಲಾ ಶಿಕ್ಷಣ ಸಂಘದ ಅಧ್ಯಕ್ಷರಾದ ವೀರಭದ್ರಸ್ವಾಮಿ, ರಾಮಸ್ವಾಮಿ, ಕಾರ್ಯಾಧ್ಯಕ್ಷರಾದ ಮಹದೇವಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.

Share this Article
Leave a comment