ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ನಿಷೇಧ; ಈಶ್ವರ ಖಂಡ್ರೆ ಸೂಚನೆ

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಗಣೇಶ ಹಬ್ಬದ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಸ್ಥಾಪನೆ ಮತ್ತು ವಿಸರ್ಜನೆಗೆ ಅವಕಾಶ ನೀಡದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪರಿಸರ ಸ್ನೇಹಿ, ಬಣ್ಣ ರಹಿತ ಮಣ್ಣಿನ ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಅವಕಾಶ ಕಲ್ಪಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಆದೇಶ ನೀಡಿದ್ದಾರೆ.

ಪಿಓಪಿ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಆದೇಶಿಸಿದ್ದಾರೆ.

ಪಿಓಪಿ ಮೂರ್ತಿಗಳಲ್ಲಿ ಬಳಸುವ ರಾಸಾಯನಿಕಗಳು ಹಾಗೂ ಭಾರ ಲೋಹಗಳು ಕೆರೆ, ನದಿ, ಬಾವಿ ಸೇರಿದಂತೆ ಜಲಮೂಲಗಳಿಗೆ ಸೇರಿ ಜಲಮಾಲಿನ್ಯ ಉಂಟುಮಾಡುವುದರ ಜೊತೆಗೆ ಜನ, ಜಾನುವಾರು ಹಾಗೂ ಜಲಚರಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದು ಸಚಿವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ–1974ರ ಕಲಂ 33(ಎ) ಅಡಿಯಲ್ಲಿ ಯಾವುದೇ ಜಲಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಈಗಾಗಲೇ 2023ರ ಸೆಪ್ಟೆಂಬರ್ 15ರಂದು ಹೊರಡಿಸಿರುವ ಸರ್ಕಾರಿ ಆದೇಶ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

Share this Article
Leave a comment