ದಸಂಸ ವಿರುದ್ಧ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ- ಪ್ರತಾಪ್ ಸಿಂಹ ವಿರುದ್ಧ ಹ.ರಾ.ಮಹೇಶ್ ಕಿಡಿ 

ಮಣಿಕಂಠ ಜನತಾ ರಾಯಭಾರಿ
2 Min Read

ಬೆಂಗಳೂರು: ರಾಜ್ಯದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಹರಡಿದ ದಲಿತ ಸಂಘರ್ಷ ಸಮಿತಿ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹ.ರಾ.ಮಹೇಶ್ ಕಿಡಿ ಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕರ್ನಾಟಕದ ನೆಲಕ್ಕೆ ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಹರಡಿದ್ದೇ ಪ್ರೊ. ಬಿ.ಕೃಷ್ಣಪ್ಪ ಮತ್ತು ಇತರೆ ಹಿರಿಯರು ಸ್ಥಾಪಿಸಿದ ದ.ಸಂ.ಸ / DSS ನಿಂದ..! ಕರ್ನಾಟಕದ ದಲಿತ ಚಳವಳಿಯು ರೈತ ಚಳವಳಿ, ಮಹಿಳಾ ಚಳವಳಿ, ಕನ್ನಡ ಚಳವಳಿ, ಕಾರ್ಮಿಕ ಚಳವಳಿ, ಬಹುಜನ ಚಳವಳಿ ಹಾಗೂ ಬೌದ್ಧ ಚಳವಳಿಗಳಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿರುವುದು ಇತಿಹಾಸ.

ಜಗತ್ತಿನಲ್ಲೇ ಯಾವ ಜಾತಿ ಧರ್ಮ ಲಿಂಗದವರಿಗೆ ಅನ್ಯಾಯವಾದರೂ ಅದರ ವಿರುದ್ಧ ಹೋರಾಡುವ ಎಲ್ಲಾ ಜಾತಿ ಧರ್ಮದವರನ್ನೂ ಕೂಡಿಸಿಕೊಂಡು ಚಳವಳಿ ರೂಪಿಸುವುದನ್ನು ಕಲಿಸಿಕೊಟ್ಟ DSS ಬಗ್ಗೆ ಹಗುರವಾಗಿ ಮಾತಾಡಿರುವುದು ಅಕ್ಷಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ‘ನೀಲಿ ಶಾಲು ನೀಲಿ ಬಾವುಟ’ ಎಂಬುದು ಅಂಬೇಡ್ಕರ್ವಾದದ ವೈಶಾಲ್ಯತೆ ಸೌಹಾರ್ದತೆ ಸಮಾನತೆ ಸೋದರತೆ ನ್ಯಾಯ ಮತ್ತು ಸ್ವಾಭಿಮಾನದ ಸಂಕೇತ.! ಹಾಗಾಗಿಯೇ ಬಾಬಾಸಾಹೇಬರು ತಾವು ಮೊಟ್ಟಮೊದಲು (1936) ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಗೆ ನೀಲಿಬಣ್ಣದ ಬಾವುಟವನ್ನು ಆಯ್ಕೆ ಮಾಡಿಕೊಂಡರು. ಅಂಥ ನೀಲಿ ಶಾಲಿನ ಬಗ್ಗೆ ಅದನ್ನು ಧರಿಸುವ ಸಮುದಾಯದ ಬಗ್ಗೆಯೂ ನೀವು ಅವಹೇಳಕಾರಿ ಮಾತುಗಳನ್ನಾಡಿದ್ದೀರಿ.!

ಈ ಕೂಡಲೇ ನೀವು ನಿಮ್ಮ ಮಾತುಗಳನ್ನು ಹಿಂಪಡೆಯಬೇಕು, DSS ಹಾಗು ನೀಲಿ ಶಾಲಿನ ಬಗ್ಗೆ ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಬಾಬಾಸಾಹೇಬರು ಕೇವಲ ಥಾಟ್ಸ್ ಆನ್ ಪಾಕಿಸ್ಥಾನ್ ಪುಸ್ತಕ ಮಾತ್ರ ಬರೆದಿಲ್ಲ, ಜಾತಿವಿನಾಶ, ಭಾರತದಲ್ಲಿ ಜಾತಿಗಳು, ಹಿಂದೂಧರ್ಮದ ಒಗಟುಗಳು, ಶೂದ್ರರು ಯಾರು ಅಸ್ಪೃಶ್ಯರು ಯಾರು..? ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು..? ಕ್ರಾಂತಿ ಪ್ರತಿಕ್ರಾಂತಿ ಇಂಥ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ನಿಮಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ನಿಮ್ಮ ಓದಿನ ಬಗ್ಗೆ ನಂಬಿಕೆ ಚರ್ಚೆ ಮಾಡುವ ತಾಕತ್ತು ಇದ್ದರೆ ಬನ್ನಿ ಈ ಪುಸ್ತಕಗಳ ಬಗ್ಗೆ ಸಾರ್ವಜನಿಕ ಚರ್ಚೆ ಮಾಡೋಣ..!

ಈಗಲಾದರೂ DSS ನ ಎಲ್ಲಾ ಬಣಗಳ ನಾಯಕರು ಒಂದಾಗಿ ಈ ಸಂವಿಧಾನ ವಿರೋಧಿ ಕೋಮುವಾದದ ವಿರುದ್ಧ ಹೋರಾಟ ರೂಪಿಸಲಿ. ಆರೆಸೆಸ್ ಬಿಜೆಪಿಗರ ಕೋಮುವಾದದ ವಿರುದ್ಧ ಹೋರಾಟ ರೂಪಿಸುವುದೆಂದರೆ ಮತ್ತೆ ಅಂಬೇಡ್ಕರ್ ವಿರೋಧಿ ಮತ್ತು ಜಾತಿವಾದಿಯಾದ ಕಾಂಗ್ರೆಸ್ ಪರವಾಗಿ ನಿಂತು ಅದರ ತೆಕ್ಕೆಗೆ ಬಿದ್ದು ದಯಮಾಡಿ ಮತ್ತೆ ಬಾಬಾಸಾಹೇಬರನ್ನು ಅವಮಾನಿಸಬೇಡಿ. ಯಾವ ನಾಯಿನರಿಗಳು ನಿಮಗೆ ಪಾಠ ಮಾಡಬಾರದಂತೆ ಆ ಪಕ್ಷಗಳಲ್ಲಿ ಹರಿದು ಹಂಚಿಹೋಗದೆ ದಯಮಾಡಿ ಮತ್ತೆ ಒಡೆದು ಹೋಗದಂತೆ ಒಂದಾಗಿ. ಒಂದಾಗುವುದೆಂದರೆ ನೈಜ ಅಂಬೇಡ್ಕರ್ವಾದದ ನೈಜ ನೀಲಿ ಬಣ್ಣದ ಬಹುಜನ ಸಮಾಜ ಪಕ್ಷದ ಅಡಿಯಲ್ಲಿ ಬಂದು ಸ್ವಾಭಿಮಾನಿಗಳಾಗಿ ಅಧಿಕಾರ ಪಡೆಯುವ ಕಡೆಗೆ ಮಹತ್ವದ ಹೆಜ್ಜೆ ಇಡಿ. ಎಂಬುದು ನನ್ನ ಕಳಕಳಿಯ ಮನವಿ.

ನೆನ್ನೆ ಈ ವ್ಯಕ್ತಿಯು ಮಸೀದಿಯ ಮುಂದೆ ನಿಂತು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾನೆ, ಕರ್ತವ್ಯ ಪಾಲಿಸಿದ ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕಿದ್ದಾನೆ. ಈಗ ಕಾಂಗ್ರೆಸ್ ಸರ್ಕಾರ, ಗೃಹ ಮಂತ್ರಿಗಳು, ಪೊಲೀಸ್ ಇಲಾಖೆ ಏನು ಕ್ರಮಕೈಗೊಳ್ಳುತ್ತದೋ ಕಾದು ನೋಡೋಣ‌ ಎಂದಿದ್ದಾರೆ.

Share this Article
Leave a comment