ಚಾಮರಾಜನಗರ, ಅ.24: ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಒಂದೆಡೆ ಮಳೆಗರೆದರೇ, ಮತ್ತೊಂದೆಡೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಘರ್ಜನೆಯೂ ಮೊಳಗಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಶ್ವಕ್ಕೆ ಶಾಂತಿಯ ಸಂದೇಶ, ಸಮಾಜಕ್ಕೆ ಸಮಾನತೆಯನ್ನು ಸಾರುವುದೇ ಬೌದ್ಧಧರ್ಮದ ಆಶಯವಾಗಿದೆ. ಬೌದ್ಧಧರ್ಮ ಎಲ್ಲಾ ಜೀವಿಗಳು ಸುಖಿಯಾಗಿರಲಿ ಎಂದು ಹೇಳುತ್ತದೆ. ಮಾನವೀಯತೆ, ಪರೋಪಕಾರವೇ ಶ್ರೇಷ್ಠವಾದ ಸೇವೆಯಾಗಿದೆ. ನಾನು ನಂಬಿದ ಗಂಗಾಧರ ಅಜ್ಜ ಅವರು ಕೂಡ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡಿದ್ದರು. ಬುದ್ಧ ಇಡೀ ಲೋಕಕ್ಕೆ ಗುರು, ಶಾಂತಿಯ ರಾಯಭಾರಿ, ವಿಶ್ವಕ್ಕೆ ಬೆಳಕು ಎಂಬುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ನಾವೆಲ್ಲರೂ ಜಾತಿ ಕೇಳುವ ಸಮಾಜಕ್ಕಿಂತ ಜ್ಞಾನ ಕೇಳುವಂತ ಸಮಾಜ ನಿರ್ಮಾಣ ಮಾಡಬೇಕಿದೆ. ಸಮಾನತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ಇದು ನಮ್ಮ ಸರ್ಕಾರದ ಧ್ಯೇಯವೂ ಆಗಿದೆ ಎಂದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಅದರಂತೆ ಬೌದ್ಧ ಧರ್ಮ ಮತ್ತು ಸಂವಿಧಾನವೂ ಅಷ್ಟೇ ಮುಖ್ಯವಾಗಿದೆ. ಇತ್ತೀಚೆಗೆ ಜಗತ್ತಿನ ಹೆಚ್ಚಿನ ದೇಶಗಳು ಬೌದ್ಧ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ನಾನು ಕೂಡ ಬುದ್ಧಗಯಾಗೆ ಭೇಟಿ ನೀಡಿದ್ದೇನೆ. ನಮ್ಮ ಸರ್ಕಾರ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಆಶಯದಂತೆ ನಡೆಯುತ್ತಿದೆ. ಮೀಸಲಾತಿ ಎಂದರೆ ಅವಕಾಶದಿಂದ ವಂಚಿತರಾದವರು ಮುಂದೆ ಬರಲು ಸಹಕಾರಿಯಾಗಲು ಪ್ರಾತಿನಿಧ್ಯವಾಗಿದೆ ಎಂದು ತಿಳಿಸಿದರು.
ಅಧಿಕಾರ ಸೇವೆಗೆ ಇರಬೇಕು ಅಹಂಕಾರಕ್ಕಾಗಿ ಅಲ್ಲ. ನಮ್ಮ ಸರ್ಕಾರ ಇದೇ ಹಾದಿಯಲ್ಲಿ ನಡೆಯುತ್ತಿದೆ. ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರು ಈ ಭಾಗದ ದಲಿತರಿಗೆ ಭೂಮಿಯನ್ನು ಕೊಟ್ಟಿದ್ದಾರೆ. ಪ್ರಸ್ತುತ ನಮ್ಮ ಸರ್ಕಾರ 10 ಲಕ್ಷಕ್ಕೂ ಹೆಚ್ಚು ನಿವೇಶನ ನೀಡಲು ಮುಂದಾಗಿದೆ. ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿಯೊಬ್ಬರಿಗೂ ನೆರವಾಗಿದೆ ಎಂದರು.

ವಸತಿ ರಹಿತರಿಗೆ ನಿವೇಶನ, ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ, ಜೆಡಿಎಸ್ ನವರು ನೀಡಿದ್ದರೇ, ನಾನು ಅವರಿಗೆ ಶರಣಾಗುತ್ತೇನೆ. ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ್ ಅವರು ಪ್ರಾರಂಭಿಸಿದ ನಳಂದ ಬೌದ್ಧ ವಿಶ್ವ ವಿದ್ಯಾಲಯಕ್ಕೆ ಎಷ್ಟು ಹಣ ಕೊಡಬೇಕು ಎಂಬ ವರದಿ ತರಿಸಿಕೊಂಡು ಅದನ್ನು ಪೂರ್ಣಗೊಳಿಸಲು ಕ್ರಮವಹಿಸಲುತ್ತೇನೆ. ಕರ್ನಾಟಕದ ಮಣ್ಣಿನಲ್ಲಿ ಬೌದ್ಧ ಧರ್ಮದ ಪರಂಪರೆ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ಕಟ್ಟಿದ ಬುದ್ಧ ವಿಹಾರವನ್ನು ನೋಡಿದ್ದೇನೆ. ನಾವು ಅಧಿಕಾರದಲ್ಲಿ ಇದ್ದಾಗ ಇಂತಹ ಸಾಕ್ಷಿ ಬಿಟ್ಟು ಹೋಗಬೇಕು ಎಂದು ಹೇಳಿದರು.
ಹಿಂದೂ ಧರ್ಮ ಯಾರ ಮನೆ ಸ್ವತ್ತಲ್ಲ, ದೇವನೊಬ್ಬ ನಾಮ ಹಲವು ಎಂದು ಹೇಳಿಕೊಂಡು ಬಂದವರು ನಾವು. ಅಂಬೇಡ್ಕರ್ ಅವರು ನಮಗೆ ದ್ವೇಷದ ರಾಜಕಾರಣ ಮಾಡುವುದನ್ನು ಕಲಿಸಿಲ್ಲ. ಮನುಷ್ಯನ ಒಳಗಿನ ದ್ವೇಷವನ್ನು ಸೋಲಿಸುವ ಬುದ್ಧ ತತ್ವ ನಮಗೆ ಅಗತ್ಯವಾಗಿದೆ. ಎಲ್ಲರೂ ದ್ವೇಷವನ್ನು ದೂರ ಮಾಡಬೇಕು. ಆದರೆ ಕೆಲವರು ನಮ್ಮ ಆಡಳಿತವನ್ನು ಸಹಿಸಿಕೊಳ್ಳದೇ ಅಸೂಯೆ, ದ್ವೇಷದಿಂದ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಅಂತವರಿಗೆ ನೀವೆಲ್ಲರೂ ಉತ್ತರವನ್ನು ಕೊಡಬೇಕಾಗಿದೆ. ದ್ವೇಷದ ರಾಜಕಾರಣಿಗಳಿಗೆ ಬೌದ್ಧ ಅನುಯಾಯಿಗಳು ಉತ್ತರವನ್ನು ನೀಡಬೇಕಿದೆ ಎಂದರು.

ಬೆಂಕಿ ಹಚ್ಚುವುದು ಬಹಳ ಸುಲಭ, ಮನೆಕಟ್ಟುವುದು ಕಷ್ಟ. ಮನುಷ್ಯನ ನಡುವೆ ಗೋಡೆಗಳನ್ನು ಕಟ್ಟುವುಕ್ಕಿಂತ ಒಬ್ಬರನ್ನೊಬ್ಬರು ಬೆಸೆಯುವ ಕೆಲಸ ಮಾಡಬೇಕು. ಈ ಅಧಿಕಾರ ಶಾಶ್ವತವಿಲ್ಲ ಎಂಬುದು ನನಗೆ ಅರಿವಿದೆ. ಶೇ.99 ರಷ್ಟು ದಲಿತರು ಡಿ.ಕೆ.ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದ್ದಾರೆ. 2028 ಕ್ಕೆ ಮತ್ತೆ ನೀವು ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನಮ್ಮ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಸಮ್ಮೇಳನ ಆಯೋಜನೆಗೆ ಕೇಳುತ್ತಿದ್ದಾರೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ರಾಮನಗರ ಜಿಲ್ಲೆಯಲ್ಲಿ ನಡೆಯಲಿದೆ. ದೇವರು ಅವಕಾಶವನ್ನು ಮಾತ್ರ ಕೊಡುತ್ತಾನೆ. ನನಗೆ ಸಿಕ್ಕಿರುವ ಅವಕಾಶವನ್ನು ಬಡವರ ಪರವಾಗಿ ಬಳಕೆ ಮಾಡಿಕೊಳ್ಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಪಿ.ಎಂ.ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್.ಕೃಷ್ಣಮೂರರ್ತಿ, ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ್, ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕರಾದ ನರೇಂದ್ರ, ಕಳಲೆ ಕೇಶವಮೂರ್ತಿ, ಜಿ.ಎನ್.ನಂಜುಂಡಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ವೆಂಕಟರಮಣಸ್ವಾಮಿ(ಪಾಪು), ಮುಳ್ಳೂರು ಶಿವಮಲ್ಲು ಹಾಗೂ ಇತರರು ಹಾಜರಿದ್ದರು.