ನಾಗವಳ್ಳಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಕಳಪೆ ಕಾಮಗಾರಿ; ಸಿಇಓಗೆ ದೂರು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ, ಸೆ.26: ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ನಡೆಯುತ್ತಿರುವ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಹೊಂಗನೂರು ಧರಣೇಂದ್ರ ದೂರು ನೀಡಿದ್ದಾರೆ.

ತಾಲೂಕಿನ ನಾಗವಳ್ಳಿ ಗ್ರಾಮದ ಕ್ರಿಶ್ಚಿಯನ್ ಬೀದಿಯಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಸುಮಾರು 50 ಲಕ್ಷ ರೂ, ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕ್ರಿಶ್ಚಿಯನ್ ಬೀದಿಗೆ ಮಾತ್ರ ಕಾಮಗಾರಿ ಅನುಮೋದನೆಯಾಗಿದೆ. ಆದರೆ ಅನುಮೋದಿತ ಸ್ಥಳದ ಉಲ್ಲಂಘನೆ ಮಾಡಿ, ಬೀದಿಯ ಅನಧಿಕೃತ ಜಾಗಕ್ಕೂ ಕಾಮಗಾರಿಯನ್ನು ವಿಸ್ತರಿಸಲಾಗಿದೆ ಎಂದು ದೂರಿದ್ದಾರೆ.

ಅದಲ್ಲದೇ ಕಾಮಗಾರಿಯನ್ನು ಎಸ್ಟೀಮೆಟ್ ಪ್ರಕಾರ ಮಾಡದೇ, ಯಾವುದೇ ಯಂತ್ರೋಪಕರಣ ಬಳಸದೇ ಸಿಮೆಂಟ್ ಮಿಕ್ಸಿಂಗ್ ಮಾಡಲಾಗುತ್ತಿದೆ. ನಿಯಮದ ಪ್ರಕಾರ 125 ಮೈಕ್ರಾನ್ ಶೀಟ್ ಹಾಕಿ ಕಾಂಕ್ರೀಟ್ ಹಾಕಬೇಕು, ಆದರೆ ಮಣ್ಣು-ಕೆಸರು ಇರುವ ಜಾಗದ ಮೇಲೆ ಕಾಂಕ್ರೀಟ್ ಹಾಕಲಾಗುತ್ತಿದೆ. ಆಗಾಗಿ ನಿಯಮ ಉಲ್ಲಂಘನೆ ಮಾಡಿ ಕಾಮಗಾರಿ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸದರಿ ಕಾಮಗಾರಿಯ ಬಿಲ್ ತಡೆ ಹಿಡಿಯಬೇಕು ಎಂದು ದೂರಿನಲ್ಲಿ ಹೊಂಗನೂರು ಧರಣೇಂದ್ರ ಅವರು ಮನವಿ ಮಾಡಿದ್ದಾರೆ.

 

Share this Article
Leave a comment