ಚಾಮರಾಜನಗರ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎಂ.ಮರಿಸ್ವಾಮಿ ಸಲಹೆ ನೀಡಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ವಿಧವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಬೇಕು. ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಕಲಿಯುವ ಜ್ಞಾನವೇ ಜೀವನದಲ್ಲಿ ನಿಜವಾದ ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದರು.

ವಿದ್ಯಾರ್ಥಿಗಳು ಜಾನಪದ ಕಲೆ, ಚಿತ್ರಕಲೆ, ಕ್ರೀಡೆ, ನೃತ್ಯ, ಸಂಗೀತ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ತಮ್ಮಲ್ಲಿ ಅಡಗಿರುವ ಬಹುಮುಖ ಪ್ರತಿಭೆ ಅನಾವರಣಗೊಳ್ಳುತ್ತದೆ. ಔಪಚಾರಿಕ ಶಿಕ್ಷಣಕ್ಕಿಂತ ಕಲಿತ ವಿದ್ಯೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾದ ಹಾದಿಯಲ್ಲಿ ಸಾಗಿದರೆ ಜೀವನ ಸುಂದರವಾಗುತ್ತದೆ ಎಂದು ಹೇಳಿದರು.
ಚಾಮರಾಜನಗರ ಜಾನಪದ ಕಲೆಗಳ ತವರೂರು ಎಂದೆ ಪ್ರಸಿದ್ಧಿಯಾಗಿದೆ. ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಕಾನೂನು ವಿಶ್ವವಿದ್ಯಾನಿಲಯ, ಸಂಗೀತ ವಿಶ್ವವಿದ್ಯಾನಿಲಯಗಳು ಇರುವಂತೆ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲ ಸಚಿವ ಪ್ರೊ.ಕೆ.ಎಂ.ಮಹಾದೇವನ್ ಮಾತನಾಡಿ, ಪದವಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದತ್ತಾ ಹೆಚ್ಚಿನ ಒತ್ತು ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಖೋ ಖೋ ಕ್ರೀಡಾಪಟು ಕುಮಾರಿ ಚೈತ್ರಾ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು, ಗುರಿಯ ಹಿಂದೆ ಗುರುವಿರಬೇಕು. ಆಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಕ್ರೀಡೆಯಲ್ಲಿ ವಿಫುಲವಾದ ಉದ್ಯೋಗವಕಾಶಗಳಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ.ಬಸವಣ್ಣ, ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ ಮೂರ್ತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಜಮುನಾ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅನುಶ್ರೀ, ಪ್ರೊ.ಸುಷ್ಮಾ, ಅರುಣಶ್ರೀ, ರೂಪಶ್ರೀ ಹಾಗೂ ಇತರರು ಉಪಸ್ಥಿತರಿದ್ದರು.