ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಏರಿಕೆ

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ 3 ರೂಪಾಯಿಗಳಷ್ಟು ಏರಿಕೆ ಮಾಡಿವೆ.

ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 97.77 ರೂ. ಮತ್ತು ಡೀಸೆಲ್ 90.67 ರೂ. ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 102.91 ರೂ. ಇದ್ದ ಪೆಟ್ರೋಲ್ ದರ ಇಂದು 106.21 ರೂ. ತಲುಪಿದೆ. ನಿನ್ನೆ 90.99 ರೂ. ಇದ್ದ ಡಿಸೇಲ್ ದರ ಇಂದು 94.10 ರೂ. ಆಗಿದೆ. ಅಂದರೆ ಪೆಟ್ರೋಲ್ ಮೇಲೆ 3.30 ರೂ. ಹಾಗೂ ಡೀಸೆಲ್ ಮೇಲೆ 3.11 ರೂ. ಏರಿಕೆಯಾಗಿದೆ.

ಏರಿಕೆಗೆ ಕಾರಣವೇನು?: ಮಧ್ಯಪ್ರಾಚ್ಯ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಳಿತವಾಗಿದೆ. 2022ರ ಏಪ್ರಿಲ್‌ನಿಂದಲೇ ದಿನನಿತ್ಯದ ಇಂಧನ ದರ ಪರಿಷ್ಕರಣೆಯನ್ನು ತೈಲ ಕಂಪನಿಗಳು ಸ್ಥಗಿತಗೊಳಿಸಿದ್ದವು. ರಷ್ಯಾ-ಉಕ್ರೇನ್ ಯುದ್ಧದ ನಂತರ ನಷ್ಟ ಅನುಭವಿಸಿದ್ದರೂ ದರ ಹೆಚ್ಚಿಸಿರಲಿಲ್ಲ. ತೈಲ ದರ ಇಳಿಕೆಯಿಂದ ಆದ ನಷ್ಟವನ್ನು ಭಾಗಶಃ ಭರಿಸಲು ಈ ಏರಿಕೆ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಜನಸಾಮಾನ್ಯರಿಗೆ ಹೊಡೆತ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇಂಧನ ದರ ಏರಿಕೆ “ಗಾಯದ ಮೇಲೆ ಬರೆ ಎಳೆದಂತಾಗಿದೆ”. ಸಾರಿಗೆ ವೆಚ್ಚ ಹೆಚ್ಚಾಗಿ ತರಕಾರಿ, ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಭೀತಿ ಎದುರಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಲೀಟರ್‌ಗೆ 2 ರೂ. ಇಳಿಕೆ ಮಾಡಿತ್ತು. ಆದರೆ ಈಗ ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ನಿಂದ ಮತ್ತೆ 3 ರೂ. ಏರಿಕೆಯಾಗಿದೆ.

“ಜನತಾ ರಾಯಭಾರಿ” ಓದುಗರಿಗೆ ಸೂಚನೆ: ವಾಹನ ಚಲಾಯಿಸುವಾಗ ಇಂಧನ ಉಳಿತಾಯದ ಕ್ರಮ ಅನುಸರಿಸಿ.

Share this Article
Leave a comment