ಚಾಮರಾಜನಗರ, ಅ.24: ಜಿಟಿ ಜಿಟಿ ಮಳೆಯ ನಡುವೆಯೂ ಧಮ್ಮಾಸಕ್ತಿ ಕುಂದದೆ, ಚಾಮರಾಜನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
ನಗರದ ರಾಮಸಮುದ್ರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಮಳೆಯ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು “ಧಮ್ಮ ನಡಿಗೆ” ಮೆರವಣಿಗೆಗೆ ಚಾಲನೆ ನೀಡಿದರು. ಜೈ ಭೀಮ್, ಬುದ್ಧಂ ಶರಣಂ ಗಚ್ಛಾಮಿ ಘೋಷಣೆಗಳೊಂದಿಗೆ ನೂರಾರು ಉಪಾಸಕರು, ಬಿಕ್ಕುಗಳು, ಯುವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆ, ಡಿವಿಯೇಷನ್ ರಸ್ತೆ ಮಾರ್ಗವಾಗಿ ಸಮ್ಮೇಳನ ಆಯೋಜನೆಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಧಮ್ಮ ನಡಿಗೆ ಜಾಥಾ ತೆರಳಿತು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಂದ ಧಮ್ಮ ಧ್ವಜಾರೋಹಣ ನೆರವೇರಿತು. ಶ್ರೀಲಂಕಾದ ಕೊಲಂಬೊ ವಿವಿಯ ಶೀಲವಂಶ ಮಹಾಥೆರೋ ಬಂತೇಜಿ ಸಾನ್ನಿಧ್ಯದಲ್ಲಿ ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಮಧ್ಯಾಹ್ನ 11:30ಕ್ಕೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮ್ಮೇಳನವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಮಳೆಯಲ್ಲೂ ಜನಸಾಗರ: ಬೆಳಿಗ್ಗೆಯಿಂದ ಸುರಿಯುತ್ತಿರುವ ತುಂತುರು ಮಳೆಯ ನಡುವೆಯೂ ಕ್ರೀಡಾಂಗಣಕ್ಕೆ ಬೌದ್ಧ ಅನುಯಾಯಿಗಳು ಆಗಮಿಸುತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ವಿಚಾರಗೋಷ್ಠಿ, ಕವಿಗೋಷ್ಠಿ, ಪುಸ್ತಕ ಮೇಳಕ್ಕೆ ಬೃಹತ್ ವ್ಯವಸ್ಥೆ ಮಾಡಲಾಗಿದೆ.
