ವಾರಾಂತ್ಯದಲ್ಲಿ 2 ದಿನ ರಜೆಗೆ ಒತ್ತಾಯಿಸಿ ಬ್ಯಾಂಕ್ ನೌಕರರಿಂದ ಪ್ರತಿಭಟನೆ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಸೆ.11: ಬ್ಯಾಂಕ್ ಗಳಲ್ಲಿ 5 ದಿನಗಳ ಕೆಲಸದ ವಾರ ಜಾರಿಗೊಳಿಸಲು ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ನಂಜನಗೂಡು ರಸ್ತೆಯಲ್ಲಿರುವ ಎಸ್.ಬಿ.ಐ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಮೂಲಕ ಸಾಗಿ ಸಂತೇಮರಹಳ್ಳಿ ವೃತ್ತ, ಚಿಕ್ಕಂಗಡಿ ಬೀದಿ ಮಾರ್ಗವಾಗಿ ಸಾಗಿ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಕೆಲಕಾಲ ಧರಣಿ ನಡೆಸಿದರು. ಬಳಿಗೆ ಅದೇ ಮಾರ್ಗವಾಗಿ ಬ್ಯಾಂಕ್ ಬಳಿ ತೆರಳಿ ಪ್ರತಿಭಟನೆ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯ ಪವನ್ ಕುಮಾರ್ ಮಾತನಾಡಿ, ಪ್ರ‌ಸ್ತುತ ಸಂದರ್ಭದಲ್ಲಿ ಬ್ಯಾಂಕ್ ನೌಕರರು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರದಲ್ಲಿ ಕೇವಲ ಒಂದು ದಿನ ರಜೆ ಇರುವುದರಿಂದ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ. ಕೇಂದ್ರದ ಆರ್.ಬಿ.ಐ, ಎಲ್ಐಸಿ, ನಬಾರ್ಡ್ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಇರುವಂತೆ ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ 5 ದಿನಗಳ ಕೆಲಸದ ವಾರ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಏಕಪಕ್ಷೀಯ ಹಾಗೂ ತಾರತಮ್ಯ ಪೂರ್ಣ ಪಿ.ಎಲ್.ಐ ಯೋಜನೆಯನ್ನು ಹಿಂಪಡೆಯಬೇಕು. ಯೂನಿಯನ್ ಗಳೊಂದಿಗೆ ಚರ್ಚಿಸಿ ಸೂಕ್ತ ಬದಲಾವಣೆಯನ್ನು ಮಾಡಬೇಕು‌ ಎಂದು ಒತ್ತಾಯಿಸಿದರು.

ಬ್ಯಾಂಕ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಕೊಡದೇ ಆಡಳಿತ ಮಂಡಳಿಯವರೇ ಸಿಂಹ ಪಾಲನ್ನು ಪಡೆದುಕೊಳ್ಳುತ್ತಿದ್ದಾರೆ. ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಬ್ಯಾಂಕ್ ಅಧಿಕಾರಿ ವರ್ಗದವರಿಗೆ ನೀಡಬೇಕು. ಪಿಂಚಣಿ, ಗ್ರ್ಯಾಜುಟಿ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಬೇಕು. ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ನಡೆಸಲಾಗುತ್ತಿದ್ದು, ನಮ್ಮ ಬೇಡಿಕೆ ಈಡೇರದಿದ್ದರೇ ಸೆ.28,29 ಹಾಗೂ 30 ರಂದು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಅದಾಗ್ಯೂ ನಮ್ಮ ಬೇಡಿಕೆ ಈಡೇರದಿದೊದರೇ ಅಕ್ಟೋಬರ್ ನಲ್ಲೂ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪ್ರಾದೇಶಿಕ ಎಸ್.ಬಿ.ಐ ಅಧಿಕಾರಿಗಳಾದ ಲೋಹಿತ್, ಗೌರವ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮಂಜುನಾಥ್, ಯೂನಿಯನ್ ಬ್ಯಾಂಕ್ ನ ಯಶ್ವಂತ್, ಕೆನರಾ ಬ್ಯಾಂಕ್ ನ ವಿಜಯ್ ಹಾಗೂ ಎಲ್ಲಾ ಬ್ಯಾಂಕ್ ಗಳ ಸಿಬ್ಬಂದಿ ವರ್ಗದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this Article
Leave a comment