*ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ಬಳಗದ ವಿರಾಟ್ ಶಿವು ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ
*ನಗರದ ಮುದುಕು ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ
ಚಾಮರಾಜನಗರ, ಸೆ.17: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಮಾರಿಗುಡಿ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಮುದುಕು ಮಾರಮ್ಮನ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರ ಆಯಸ್ಸು, ಆರೋಗ್ಯ ಹಾಗೂ ದೇಶದ ಸಮೃದ್ಧಿಗಾಗಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಬಳಿಕ ನಗರಸಭೆಯ ಪೌರಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಿ, ಸೀರೆ ವಿತರಿಸಿ ಗೌರವ ಸಲ್ಲಿಸಲಾಯಿತು.
ಸ್ವಚ್ಛ ಭಾರತದ ನಿಜವಾದ ರೂವಾರಿಗಳಾದ ಪೌರಕಾರ್ಮಿಕರ ಸೇವೆ ಸದಾ ಸ್ಮರಣೀಯ. ಅವರ ಬೆವರಿನಿಂದ ನಗರ ಆರೋಗ್ಯವಾಗಿರುತ್ತದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಚಿಂತಕ ಹಿರಿಯ ಪ್ರದೀಪ್ ಕುಮಾರ್ ದೀಕ್ಷಿತ್ ಮಾತನಾಡಿ ನರೇಂದ್ರ ಮೋದಿ ಅವರು ವ್ಯಕ್ತಿಯಲ್ಲ, ಒಂದು ಯುಗ. ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಧ್ಯೇಯೋದ್ದೇಶ, ದೇಶದ ಮೇಲಿನ ಕಾಳಜಿಯನ್ನು ಜನರಿಗೆ ತಿಳಿಸುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶ. ಎಲ್ಲರನ್ನೂ ಒಗ್ಗೂಡಿಸುವುದೇ ಮೋದಿಜಿ ಅವರ ಗುರಿ. ಪೌರಕಾರ್ಮಿಕರಿಗೆ ಸನ್ಮಾನಿಸಿ ಸೀರೆ ನೀಡುವುದೇ ನಿಜವಾದ ದೇಶಸೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಮಾತನಾಡಿ, ಮೋದಿಜಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸು ಮಾಡುತ್ತಿರುವುದು ಈ ಪೌರಕಾರ್ಮಿಕರು. ಮುಂಜಾನೆ 4 ಗಂಟೆಗೆ ಎದ್ದು ನಮ್ಮ ಬೀದಿಗಳನ್ನು ಸ್ವಚ್ಛಗೊಳಿಸುವ ಇವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮೋದಿಜಿ ಅವರ ಜನ್ಮದಿನವನ್ನು ಇಂತಹ ಶ್ರಮಜೀವಿಗಳೊಂದಿಗೆ ಆಚರಿಸುವುದು ಅತ್ಯಂತ ಪುಣ್ಯದ ಕಾರ್ಯ ಎಂದು ಹೇಳಿದರು.
ನರೇಂದ್ರ ಮೋದಿ ಅಭಿಮಾನಿ ಬಳಗದ ಅಧ್ಯಕ್ಷ ಶಿವು ವಿರಾಟ್ ಮಾತನಾಡಿ, ನಾವು ಪ್ರತಿವರ್ಷ ಮೋದಿಜಿ ಹುಟ್ಟುಹಬ್ಬವನ್ನು ಸೇವಾ ಕಾರ್ಯಗಳ ಮೂಲಕ ಆಚರಿಸುತ್ತೇವೆ. ಈ ಬಾರಿ ಪೌರಕಾರ್ಮಿಕ ತಾಯಂದಿರಿಗೆ ಸನ್ಮಾನಿಸಿ, ಸೀರೆ ವಿತರಿಸುವ ಮೂಲಕ ಸಣ್ಣ ಗೌರವ ಸಲ್ಲಿಸಿದ್ದೇವೆ. ಇದು ರಾಜಕೀಯವಲ್ಲ, ಮೋದಿಜಿ ಮೇಲಿನ ಅಭಿಮಾನದಿಂದ ಮಾಡುವ ನಿಸ್ವಾರ್ಥ ಸೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ, ಮಲ್ಲಿಕಾರ್ಜುನಪ್ಪ, ಜಯಸಂದರ್, ಮೂಡ್ಲುಪುರ ನಂದೀಶ್, ರಾಮಚಂದ್ರ, ವೃಷಭೇಂದ್ರಪ್ಪ, ನಿಜಗುಣ ರಾಜು, ಡಾ.ಬಾಬು, ಆರ್ ಸುಂದರ್. ಶಿವು,ಹೋರಾಟಗಾರ ಶ್ರೀನಿವಾಸ್ ಗೌಡ,ಅಭಿಮಾನಿ ಬಳಗದ ನಾಗೇಂದ್ರ,ರವಿ,ಮಣಿಕಂಠ,ಪ್ರದೀಪ್, ಮನು,ಅರುಣ್,ರಾಕೇಶ್ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.