*186 ಮಂದಿ ರೈತರಿಗೆ 1.99 ಕೋಟಿ ರೂ.ಗಳ ಬೆಳೆ ಸಾಲ ವಿತರಣೆ
*11 ವರ್ಷಗಳ ಅವಧಿಯಲ್ಲಿ 13 ಕೋಟಿ ರೂ.ಗಳ ವ್ಯವಹಾರ
ಚಾಮರಾಜನಗರ, ಸೆ.18: ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ವಹಿವಾಟು ನಡೆಸಿ, ಸಂಘದ 186 ಮಂದಿ ರೈತರಿಗೆ ಕೃಷಿ ಸಾಲವಾಗಿ 1.99 ಕೋಟಿ ರೂ. ಗಳನ್ನು ವಿತರಣೆ ಮಾಡಿದ್ದು, ಪ್ರಸಕ್ತ ವ಼ರ್ಷ 1.99 ಲಕ್ಷ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ. ಮಹದೇವಶೆಟ್ಟಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರು ಸಹಕಾರ ಮತ್ತು ಸಂಘದಿಂದ ಪಡೆದುಕೊಂಡಿದ್ದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದ್ದರಿಂದ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗಿದೆ. ನಮ್ಮ ಸಂಘವು ಪ್ರತಿ ವರ್ಷವು ಸಹ ಲಾಭದಲ್ಲಿದ್ದು, ಸ್ವಂತ ಕಟ್ಟಡವನ್ನು ಹೊಂದಿದೆ. ಕಟ್ಟಡ ನಿರ್ಮಾಣಕ್ಕೆ ಪಡೆದುಕೊಂಡಿದ್ದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಜೊತೆಗೆ ಎಲ್ಲಾ ಮೂಲಗಳಿಂದ ಸಹಕಾರ ಸಂಘವು ಉತ್ತಮವಾಹಿ ವ್ಯವಹಾರ ಮಡಿದ ಪರಿಣಾಮ 1.99 ಲಕ್ಷ ರೂ. ನಿವ್ವಳ ಲಾಭ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನಿವ್ವಳ ಲಾಭವನ್ನು ಪಡೆದುಕೊಳ್ಳುವ ಜೊತೆಗೆ ಸಂಘದ ಸದಸ್ಯರಿಗೆ ಇದರ ಲಾಭಾಂಶವನ್ನು ಮುಂದಿನ ದಿನಗಳಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ಮಹದೇವಶೆಟ್ಟಿ ತಿಳಿಸಿದರು.
ಸಂಘವು ಆರಂಭಗೊಂಡು 11 ವರ್ಷಗಳನ್ನು ಪೂರ್ಣಗೊಳಿಸಿದ್ದು, ಸಂಘದಲ್ಲಿ 2041 ಮಂದಿ ಷೇರುದಾರರು 3451200 ರೂ.ಗಳ ಷೇರು ಹಣವನ್ನು ಹೊಂದಿದೆ. ಸಂಘಕ್ಕೆ 467 ಮಂದಿ ಸದಸ್ಯರು ಪಿಗ್ನಿಯಿಂದಲೇ 96,21,450 ರೂ.ಗಳ ಸಂಗ್ರಹವಾಗುತ್ತಿದೆ. ಸಂಘದ ವಹಿವಾಟು ನೋಡಿ ವಿಶ್ವಾಸ ಹೊಂದಿ ಸಂಘದ ಉಳಿತಾಯ ಖಾತೆಯಲ್ಲಿ 609 ಮಂದಿ 11,02956 ರು.ಗಳ ಉಳಿತಾಯ ಮಾಡಿದ್ದಾರೆ ಎಂದು ತಿಳಿಸಿದರು.
ಸಂಘವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆಗೆ ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಹೆಚ್ಚು ಮಂದಿ ರೈತರು ಶೂನ್ಯ ಬಡ್ಡಿ ಸಾಲವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದು ಈ ಬಾರಿ 186 ಮಂದಿ ರೈತರಿಗೆ 1,99,86000 ರೂ.ಗಳ ಸಾಲವನ್ನು ನೀಡಿದೆ. ಸಂಘದಿಂದ ಬಳಕೆ ಸಾಲವಾಗಿ 230 ಮಂದಿಗೆ 1.21 ಕೋಟಿ ರೂ, ನೀಡಲಾಗಿದೆ. ವಾಹನ ಸಾಲವಾಗಿ 5 ಮಂದಿಗೆ 1.92 ಲಕ್ಷ ರೂ, ಗಳ ನೀಡಲಾಗಿದೆ. ಒಟ್ಟಾರೆ ಸಂಘವು ತಾಲೂಕಿನಲ್ಲಿಯೇ ಉತ್ತಮವಾಗಿ ಸಂಘವಾಗಿ ಹೊರ ಹೊಮ್ಮಿದ್ದು, ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಸಾಧ್ಯವಾಗಿದೆ ಎಂದು ಮಹದೇವಶೆಟ್ಟಿ ತಿಳಿಸಿದರು.
ನಮ್ಮ ಸಂಘವನ್ನು ಬ್ಯಾಂಕ್ ಮಾದರಿಯಾಗಿ ಪರಿವರ್ತನೆ ಮಾಡಲಾಗಿದೆ. ರೈತರ ಖಾತೆಗಳನ್ನು ಕಂಪ್ಯೂಟೀಕರಣಗೊಳಿಸಿ, ಗ್ರಾಹಕರಿಗೆ ಬ್ಯಾಂಕ್ ಮಾದರಿಯಲ್ಲಿ ಸೇವೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆಯನ್ನು ನಮ್ಮ ಸಂಘದಲ್ಲಿಯೇ ಸದಸ್ಯರಿಗೆ ಕಲ್ಪಿಸಿಕೊಡಬೇಕೆಂಬ ನಮ್ಮೆಲ್ಲರ ಆಶಯವಾಗಿದೆ ಎಂದರು.
ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಟಿ. ಮಂಜು ಮಾತನಾಡಿ, ಹರದನಹಳ್ಳಿ ಸಹಕಾರ ಸಂಘವು ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದೆ. ಬಹಳಷ್ಟು ಸಂಘಗಳು ಇನ್ನು ಸಹ ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿಲ್ಲ. ಆದರೆ, ಹರದನಹಳ್ಳಿ ಸಹಕಾರ ಸಂಘ ಇದಕ್ಕೆ ಮಾದರಿಯಾಗಿ ಬ್ಯಾಂಕ್ ಮಾದರಿಯಲ್ಲಿ ವಹಿವಾಡು ನಡೆಸುತ್ತಿದೆ. ಆಡಳಿತ ಮಂಡಲಿ ಹಾಗು ನೌಕರರ ಶ್ರಮ ಬಹಳ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಂಘದ ಸದಸ್ಯರು ಸಂಘವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಮುನ್ನಡೆಸುವ ಜೊತೆಗೆ ಸಂಘದ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ, ಸದಸ್ಯರಿಗೆ ಲಾಭಂಶವನ್ನು ವಿಲೇವಾರಿ ಮಾಡಬೇಕು. ಆಹ್ವಾನ ಪತ್ರಿಕೆಯ ಜೊತೆಯಲ್ಲಿ ಅಡಿಟ್ ವರದಿಯನ್ನು ಮುದ್ರಿಸಿಕೊಡುವಂತೆ ಸಲಹೆ ಸೂಚನೆಗಳನ್ನು ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಎಚ್.ಕೆ. ಸಿದ್ದರಾಜು ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಮ, ನಿರ್ದೇಶಕರಾದಎಸ್. ಪುಟ್ಟರಾಜಶೆಟ್ಟಿ ಬಂಗಾರನಾಯಕ್, ರಾಜಣ್ಣ, ಆರ್. ವೆಂಕಟೇಶ್, ಎಂ. ಬಂಗಾರಶೆಟ್ಟಿ, ಎಂ. ರವಿಕುಮಾರ್, ವಿ. ರವಿಕುಮಾರ್, ಶಫಿ ಅಹಮದ್, ಗಿರಿಜಮ್ಮ, ಸಾವಿತ್ರಿ, ನೌಕರರಾದ ಎಸ್. ಮಂಜು, ವೈ.ಜಿ. ನವೀನ್ಕುಮಾರ್, ಸಿದ್ದರಾಜು, ವಿ. ಯೋಗನರಸಿಂಹಸ್ವಾಮಿ, ಎಸ್. ಕೃಷ್ಣರಾಜ್ ಹಾಗೂ ಸರ್ವ ಸದಸ್ಯರು ಇದ್ದರು.