ಚಾಮರಾಜನಗರದಲ್ಲಿ ಸಾರ್ವಜನಿಕರಿಂದಲೇ “ಲೋ ನವೀನ” ನಿಗೆ ಭರ್ಜರಿ ಪ್ರಚಾರ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಕೋಣಾಣೆ ಹಾಡಿನ ಮೂಲಕ ಮನೆಮಾತಾಗಿರುವ ‘ಲೋ ನವೀನ”‘ ಚಿತ್ರ ಮೇ 15 ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಾರ್ವಜನಿಕರೇ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಚಾಮರಾಜನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶ್ರೀ ಭುವನೇಶ್ವರಿ ವೃತ್ತ, ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಹಾಗೂ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು “ಲೋ ನವೀನ” ಚಿತ್ರದ ಪೋಸ್ಟರ್ ಗಳನ್ನು ಹಿಡಿದು ಚಿತ್ರವನ್ನು ವೀಕ್ಷಣೆ ಮಾಡವಂತೆ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ.

ಕೆಲವು ಕಡೆಗಳಲ್ಲಿ ಹಳ್ಳಿಗಾಡಿನ ಮಹಿಳೆಯರು ಕೋಣಾಣೆ, ಕೋಣಾಣೆ ಹಾಡನ್ನು ಹಾಡುವ ಮೂಲಕ ಲೋ ನವೀನ ಆಲ್ ದಿ ಬೆಸ್ಟ್ ಕಣೋ ಎಂದು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಆಟೋ, ಬಸ್ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಲೋ ನವೀನ ಚಿತ್ರದ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಯುವ ಕಲಾವಿದರ ಬಳಗದವರು ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ ಗಾಯಕ ನವೀನ್ ಸಜ್ಜು ಅವರ ಚಿತ್ರ ಭರ್ಜರಿ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತಿದ್ದಾರೆ.

ಬಹುಮುಖ್ಯವಾಗಿ ಲೋ ನವೀನ ಚಿತ್ರದಲ್ಲಿ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಯುವ ಕಲಾವಿದ, ಬಹುಮುಖ ಪ್ರತಿಭೆ ರಮೇಶ್ ಪಾಪಯ್ಯ ಅವರು ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿದ್ದು, ಜಿಲ್ಲೆಯ ಜನರು ಚಿತ್ರದ ಮೇಲೆ  ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಒಟ್ಟಾರೆಯಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಲೋ ನವೀನ ಚಿತ್ರಕ್ಕೆ ಸಿನಿಮಾ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಇದೇ ಮೇ 15 ರಂದು ಚಾಮರಾಜನಗರದ ವಿವಿಧ ಚಿತ್ರಮಂದಿರಗಳಲ್ಲಿ ಲೋ ನವೀನ ಚಲನಚಿತ್ರ ಬಿಡುಗಡೆಯಾಗುತ್ತಿದ್ದು, ಗ್ರಾಮೀಣ ಸೊಗಡಿನ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.

Share this Article
Leave a comment