ಚಾಮರಾಜನಗರ: ತಾಲೂಕಿನ ಜನ್ನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಜನ್ನೂರು ಗ್ರಾಮದ ಗೋಮಾಳದಲ್ಲಿ ಹಣವನ್ನು ಪಣಕ್ಕಿಟ್ಟು ಕೆಲವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಸಂತೇಮರಹಳ್ಳಿ ವೃತ್ತದ ಸಿಪಿಐ ಎಸ್.ಎಲ್.ಸಾಗರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜೂಜು ಅಡ್ಡೆ ಮೇಲೆ ಪೊಲೀಸರು ಶುಕ್ರವಾರ ದಾಳಿ ನಡೆಸಿ, ಹೊನ್ನಯ್ಯ ಮತ್ತು ಇನ್ನಿತರೆ ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಇಸ್ಪೀಟ್ ಆಟದಲ್ಲಿ ಪಣಕ್ಕೆ ಇಟ್ಟಿದ್ದ ಒಟ್ಟು 5240 ರೂ, ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.