ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ

ಮಣಿಕಂಠ ಜನತಾ ರಾಯಭಾರಿ
1 Min Read

ಹನೂರು: ಮಲೆ ಮಹದೇಶ್ವರ ಬೆಟ್ಟದಿಂದ
ನಾಗಮಲೆಗೆ ತೆರಳುತ್ತಿದ್ದ ಬಾಲಕ ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರು ಮೂಲದ ಹರ್ಷಿತ್ (10) ಮೃತ ಬಾಲಕ. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ದೇವಾಲಯಕ್ಕೆ ಆಗಮಿಸಿದ್ದ ಬಾಲಕ ಕುಟುಂಬದವರೊಡನೆ ಭಾನುವಾರ ಬೆಳಿಗ್ಗೆ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುವಾಗ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಎಳೆದೊಯ್ದಿದೆ. ಸುಮಾರು ಅರ್ಧ ತಾಸಿನ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದ್ದು, ಬಾಲಕನ ಕತ್ತು ಸೇರಿದಂತೆ ಅಂಗಾಂಗಗಳು ರಕ್ತ ಸಿಕ್ತವಾಗಿತ್ತು.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ:
ಭಕ್ತರು ನಾಗಮಲೆಗೆ ತೆರಳಲು ಅರಣ್ಯ ಇಲಾಖೆಯವರು ಬೆಳಿಗ್ಗೆ 7 ಗಂಟೆ ಬಳಿಕ ಟಿಕೆಟ್ ನೀಡುತ್ತಿದ್ದರು. ಆದರೆ ಭಾನುವಾರ 6 ಗಂಟೆಗೆ ಟಿಕೆಟ್ ನೀಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಈ ಸಾವಿಗೆ ಅರಣ್ಯ ಇಲಾಖೆಯವರೆ ಕಾರಣ ಎಂದು ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪೊನ್ನಾಚಿ ಸ್ನೇಹಜೀವಿ ರಾಜು ಆರೋಪಿಸಿದ್ದಾರೆ.

ಮುಂದುವರೆದ ಚಿರತೆ ದಾಳಿ:
ಮಲೆ ಮಹದೇಶ್ವರ ಬೆಟ್ಟ ಕಾನನದಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಈ ಹಿಂದೆ ಮಂಡ್ಯ ಮೂಲದ ಪಾದಯಾತ್ರಿ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೇ ಕುಟುಂಬಸ್ಥರ ಜೊತೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ತರಚಿದ ಗಾಯಗಳಾಗಿ ಬಾಲಕ ಬದುಕುಳಿದಿದ್ದ. ಇದಾದ ಬಳಿಕ ಭಾನುವಾರ ಮುಂಜಾನೆ ಬಾಲಕ ಚಿರತೆ ದಾಳಿಗೆ ಬಲಿಯಾಗಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ತಂದಿದೆ.

Share this Article
Leave a comment