ಚಾಮರಾಜನಗರ: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್.ಋಗ್ವೇದಿ ಅವರನ್ನು ಆಯ್ಕೆಮಾಡಲಾಗಿದೆ.
ಚಾಮರಾಜನಗರದ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಅವರ ಕಳೆದ ಮೂರು ದಶಕಗಳ ನಿರಂತರ ಸೇವೆಯನ್ನು ಪರಿಗಣಿಸಿ, ಸಂಸ್ಕೃತಿ ಮತ್ತು ಸಾಹಿತ್ಯ ಸಂಘಟನೆಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕಳೆದ 51 ವರ್ಷಗಳಿಂದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕೊಡುತ್ತಿರುವ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಋಗ್ವೇದಿಯವರಿಗೆ ಸಂದಿದೆ ಎಂದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ರಾವ್ ತಿಳಿಸಿದ್ದಾರೆ.

ಕಳೆದ 34 ವರ್ಷಗಳಿಂದ 3000 ಕ್ಕೂ ಹೆಚ್ಚು ವಿವಿಧ ರಾಷ್ಟ್ರೀಯ ಮತ್ತು ರಾಜ್ಯದ ಕಾರ್ಯಕ್ರಮಗಳು, ರಾಷ್ಟ್ರೀಯತೆ, ಆಧ್ಯಾತ್ಮಿಕ, ಸಂಸ್ಕೃತಿ, ಪರಂಪರೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿರುವ ಋಗ್ವೇದಿ ಅವರು ಉಪನ್ಯಾಸಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷ, ಪದಾಧಿಕಾರಿಗಳಾಗಿ, ಕಾರ್ಯಕರ್ತರಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಸಾಂಸ್ಕೃತಿಕ ಚಿಂತಕರಾಗಿ ಗಡಿನಾಡಿನಲ್ಲಿ ಛಾಪು ಮೂಡಿಸಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್, ಜಿಲ್ಲಾ ಗಮಕ ಕಲಾ ಪರಿಷತ್ತು,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಋಗ್ವೇದಿಯವರಿಗೆ ಆರ್ಯಭಟ ಪ್ರಶಸ್ತಿ ನೀಡಿರುವ ಸುಸಂದರ್ಭದಲ್ಲಿ ಅನೇಕ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 23 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನ್ ನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್.ಎಲ್. ರಾವ್ ವಹಿಸಲಿದ್ದಾರೆ.