ಬದಲಾದ ಘೋಷಣೆ, ಆರ್‌ಸಿಬಿ ದಾಖಲೆ ನಿರ್ಮಾಣ

ಮಣಿಕಂಠ ಜನತಾ ರಾಯಭಾರಿ
2 Min Read

ಅಹಮದಾಬಾದ್: ಬೌಲರ್‌ಗಳ ಶಿಸ್ತು, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಕ್ಲಾಸ್ ಆಟದಿಂದ ಆರ್‌ಸಿಬಿ ಸತತ 2ನೇ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದು, “ಈ ಸಲ ಕಪ್ ನಮ್ದೇ” ಘೋಷಣೆ ಈಗ “ಈ ಸಲವೂ ಕಪ್ ನಮ್ದೇ”* ಎಂದು ಬದಲಾಗಿದೆ!

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಮಹಾಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು‌ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸತತ 2ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸತತ ಎರಡು ಬಾರಿಗೆ ಐಪಿಎಲ್ ಟ್ರೋಫಿ ಪಡೆಯುವುದರೊಂದಿಗೆ ಚೆನ್ನೈ, ಮುಂಬೈ ಬಳಿಕ ಟೈಟಲ್ ಡಿಫೆಂಡ್ ಮಾಡಿದ 3ನೇ ತಂಡ ಎಂಬ ದಾಖಲೆಯನ್ನು ಆರ್‌ಸಿಬಿ ಬರೆದಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್‌ನ ಟಾಪ್ ಆರ್ಡರ್ ಆರ್.ಸಿ.ಬಿ ಬೌಲರ್ ಗಳ ಕರಾರುವಕ್ಕಾದ ದಾಳಿಯಿಂದ ಕುಸಿಯಿತು. ಸಾಯಿ ಸುದರ್ಶನ್, ಶುಭಮನ್ ಗಿಲ್, ಜೋಸ್ ಬಟ್ಲರ್ ಬೇಗನೆ ಔಟಾದರು. ರಸಿಕ್ ಸಲಾಮ್ 3/27, ಭುವನೇಶ್ವರ್ ಕುಮಾರ್ 2/29 ಹಾಗೂ ಜೋಶ್ ಹ್ಯಾಜಲ್‌ವುಡ್ 2/37 ಗುಜರಾತ್‌ ಅನ್ನು 155ಕ್ಕೆ ಕಟ್ಟಿಹಾಕಿದರು. ವಾಷಿಂಗ್ಟನ್ ಸುಂದರ್ ಅಜೇಯ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಕೊಹ್ಲಿ ‘ಚೇಸ್ ಮಾಸ್ಟರ್’ ಆಟ: 156 ರನ್ ಚೇಸ್ ಮಾಡಿದ ಆರ್‌ಸಿಬಿಗೆ 62 ರನ್‌ಗಳ ಓಪನಿಂಗ್ ಜೊತೆಯಾಟ ಭದ್ರ ಅಡಿಪಾಯ ಹಾಕಿತು. ನಂತರ ವಿಕೆಟ್‌ಗಳು ಬಿದ್ದರೂ ವಿರಾಟ್ ಕೊಹ್ಲಿ ಅಜೇಯ 75 ರನ್ (42 ಎಸೆತ) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ಕೊಹ್ಲಿ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಮತ್ತು 10 ವರ್ಷಗಳ ನಂತರ ಪ್ಲೇಆಫ್‌ನಲ್ಲಿ ಮೊದಲ ಅರ್ಧಶತಕವಾಗಿರುವುರು ವಿಶೇಷವಾಗಿತ್ತು. 18ನೇ ಓವರ್‌ನಲ್ಲಿ ಕೊಹ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ರನ್ ಗಳಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೂ ವಿರಾಟ್ ಕೊಹ್ಲಿ ಪಾತ್ರರಾದರು.

ದಾಖಲೆಗಳ ಸುರಿಮಳೆ: ಆರ್‌ಸಿಬಿ ಸತತ 2ನೇ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. ಸಿಎಸ್‌ಕೆ ಮತ್ತು ಮುಂಬೈ ಬಳಿಕ ಟೈಟಲ್ ಡಿಫೆಂಡ್ ಮಾಡಿದ 3ನೇ ತಂಡವಾಗಿ ಆರ್‌ಸಿಬಿ ಹೊರಹೊಮ್ಮಿತು. ಆರ್‌ಸಿಬಿ ನಾಯಕ ರಂಜಿತ್ ಪಾಟಿದಾರ್ ಅವರು ಧೋನಿ, ಗಂಭೀರ್, ರೋಹಿತ್ ನಂತರ ಕನಿಷ್ಠ 2 ಐಪಿಎಲ್ ಟ್ರೋಫಿ ಗೆದ್ದ 4ನೇ ನಾಯಕರಾಗಿದ್ದಾರೆ. ಇನ್ನು 18 ವರ್ಷ ಕಾದು ಮೊದಲ ಕಪ್ ಗೆದ್ದ ಕೊಹ್ಲಿ, ಈಗ ಸತತ 2ನೇ ಟ್ರೋಫಿ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಸಂಭ್ರಮದ ಕ್ಷಣ: ವಿನ್ನಿಂಗ್ ರನ್ ಬರುತ್ತಿದ್ದಂತೆ ಆರ್‌ಸಿಬಿ ಡಗೌಟ್ ಸಂಭ್ರಮಿಸಿತು. ಸುಮಾರು 1 ಲಕ್ಷದಷ್ಟು ಪ್ರೇಕ್ಷಕರು ಸೇರಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಭ್ರಮದ ಕ್ಷಣ ಜೋರಾಗಿತ್ತು. ಬೆಂಗಳೂರು, ಮೈಸೂರು, ಚಾಮರಾಜನಗರ ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಆರ್.ಸಿ.ಬಿ ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

Share this Article
Leave a comment