ಜಪಾನ್‌ನಲ್ಲಿ ಕಾನೂನುಬಾಹಿರ ಮಸೀದಿ ವಿವಾದ: ಮುಜುಗರಕ್ಕೊಳಗಾದ ಪಾಕಿಸ್ತಾನ

ಮಣಿಕಂಠ ಜನತಾ ರಾಯಭಾರಿ
1 Min Read

ಟೋಕಿಯೋ/ಇಸ್ಲಾಮಾಬಾದ್: ಜಪಾನ್‌ನಲ್ಲಿ ಪಾಕಿಸ್ತಾನಿ ಸಮುದಾಯವು ನಿರ್ಮಿಸಿರುವ ಮಸೀದಿಯೊಂದು ಕಾನೂನುಬಾಹಿರ ಎಂಬ ಕಾರಣಕ್ಕೆ ತೆರವು ಭೀತಿ ಎದುರಿಸುತ್ತಿದ್ದು, ಇದು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.

ಜಪಾನ್‌ನ ಸೈತಾಮಾ ಪ್ರಾಂತ್ಯದ ಕಾವಾಗೋಯೆ ನಗರದಲ್ಲಿ ಈ ಘಟನೆ ನಡೆದಿದ್ದು, ಕಾನೂನು ಉಲ್ಲಂಘನೆಯ ವಿವಾದದ ಬೆನ್ನಲ್ಲೇ ಟೋಕಿಯೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಈ ಮಸೀದಿಯಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿದೆ.
ಜಪಾನ್‌ನ ಕಾವಾಗೋಯೆ ನಗರದ ‘ಅರ್ಬನ್ ಡೆವಲಪ್‌ಮೆಂಟ್ ಕಂಟ್ರೋಲ್’ ವಲಯದಲ್ಲಿ ಅಗತ್ಯ ಅನುಮತಿಗಳಿಲ್ಲದೆ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ನಗರ ಆಡಳಿತ ಸಂಸ್ಥೆ ಸ್ಪಷ್ಟಪಡಿಸಿದೆ.

ಜಪಾನ್‌ನ ನಗರ ಯೋಜನಾ ಕಾಯ್ದೆಯಡಿ ನಿರ್ಬಂಧಿತ ಪ್ರದೇಶವಾಗಿರುವ ಇಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿರುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಜಪಾನ್ ಅಧಿಕಾರಿಗಳು ಈ ಹಿಂದೆಯೇ ಹಲವು ಬಾರಿ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದರೂ, ಅದನ್ನು ನಿರ್ಲಕ್ಷಿಸಿ ಮಸೀದಿ ನಿರ್ಮಾಣ ಪೂರ್ಣಗೊಳಿಸಲಾಗಿತ್ತು ಎನ್ನಲಾಗಿದೆ.

ಈ ವಿವಾದವು ರಾಜತಾಂತ್ರಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಲು ಮುಖ್ಯ ಕಾರಣ, ಕಳೆದ ಏಪ್ರಿಲ್ 3 ರಂದು ಜಪಾನ್‌ಗೆ ಪಾಕಿಸ್ತಾನದ ರಾಯಭಾರಿಯಾಗಿರುವ ಅಬ್ದುಲ್ ಹಮೀದ್ ಅವರ ಸಮ್ಮುಖದಲ್ಲೇ ಈ ಮಸೀದಿಯ ಉದ್ಘಾಟನಾ ಸಮಾರಂಭ ನಡೆದಿತ್ತು. ರಾಯಭಾರಿಯೇ ಪಾಲ್ಗೊಂಡಿದ್ದ ಮಸೀದಿ ಈಗ ಬೇಜವಾಬ್ದಾರಿಯಿಂದ ಕಾನೂನು ಉಲ್ಲಂಘಿಸಿ ಕಟ್ಟಲಾಗಿದೆ ಎಂಬುದು ಸಾಬೀತಾಗುತ್ತಿದ್ದಂತೆ ಜಪಾನ್ ಸರ್ಕಾರ ಮಸೀದಿಯನ್ನು ಧ್ವಂಸಗೊಳಿಸಲು ಸಿದ್ಧತೆ ನಡೆಸಿದೆ.
ಘಟನೆಯಿಂದ ತೀವ್ರ ಮುಜುಗರಕ್ಕೊಳಗಾಗಿರುವ ಟೋಕಿಯೋದಲ್ಲಿನ ಪಾಕಿಸ್ತಾನಿ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಜಪಾನ್‌ನ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳಿಗೂ ತಮಗೂ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮಸೀದಿಯ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದಿವೆ ಎಂಬ ಆಯೋಜಕರ ಭರವಸೆಯ ಮೇರೆಗಷ್ಟೇ ರಾಯಭಾರಿಗಳು ಉದ್ಘಾಟನೆಗೆ ಹೋಗಿದ್ದರು ಎಂದು ಸಮರ್ಥಿಸಿಕೊಂಡಿರುವ ಕಚೇರಿಯು, ಜಪಾನ್‌ನಲ್ಲಿರುವ ತನ್ನ ದೇಶದ ನಾಗರಿಕರು ಸ್ಥಳೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಸದ್ಯ ಮಸೀದಿ ತೆರವು ಪ್ರಕ್ರಿಯೆಯನ್ನು ಜಪಾನ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Share this Article
Leave a comment