ಐತಿಹಾಸಿಕ ದಾಖಲೆಯತ್ತ ಪ್ರಧಾನಿ ಮೋದಿ; ನೆಹರು ಹೆಸರಲ್ಲಿದ್ದ ದಾಖಲೆ ಬ್ರೇಕ್!

ಮಣಿಕಂಠ ಜನತಾ ರಾಯಭಾರಿ
2 Min Read

ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಪರೂಪದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಬರುವ ಜೂನ್ 10 ರಂದು ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದ್ದ, ‘ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಅತ್ಯಂತ ಸುದೀರ್ಘ ಅವಧಿ ಸೇವೆ ಸಲ್ಲಿಸಿದ’ ದಾಖಲೆಯನ್ನು ಅಧಿಕೃತವಾಗಿ ಮುರಿಯಲಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1951-52 ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಈ ಮೊದಲ ಚುನಾವಣೆಯ ನಂತರ ಮೇ 13, 1952 ರಂದು ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಂದ ಮೇ 27, 1964 ರಂದು ಅವರು ನಿಧನರಾಗುವವರೆಗೂ, ಅಂದರೆ ಸತತವಾಗಿ 4,398 ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದರು. ಇದೀಗ ಪ್ರಧಾನಿ ಮೋದಿ ಅವರು ನೆಹರೂ ಅವರ ಈ ಸುದೀರ್ಘ ಅವಧಿಯ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು, 2019 ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳಲ್ಲೂ ಭರ್ಜರಿ ಜಯ ಸಾಧಿಸಿ ಸದ್ಯ ಮೂರನೇ ಅವಧಿಗೆ ಪ್ರಧಾನಿ ಪೀಠದಲ್ಲಿದ್ದಾರೆ. ಜೂನ್ 10 ರ ವೇಳೆಗೆ ಪ್ರಧಾನಿ ಮೋದಿ ಅವರು ಕಚೇರಿಯಲ್ಲಿ 4,399 ದಿನಗಳನ್ನು ಪೂರೈಸಲಿದ್ದು, ನೆಹರೂ ಅವರ ದಾಖಲೆಗಿಂತ ಒಂದು ದಿನ ಮುನ್ನಡೆ ಸಾಧಿಸಲಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲೇ ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ದೇಶವನ್ನಾಳಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

ಜವಾಹರಲಾಲ್ ನೆಹರೂ ಅವರ ಮಗಳು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಸತತ 4,077 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಮೂರನೇ ದೊಡ್ಡ ಅವಧಿಯಾಗಿದೆ. ನೆಹರೂ ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ದೊಡ್ಡ ಮಟ್ಟದ ಪ್ರಬಲ ವಿರೋಧ ಪಕ್ಷಗಳಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ತೀವ್ರ ರಾಜಕೀಯ ಪೈಪೋಟಿ ಮತ್ತು ಸವಾಲುಗಳ ನಡುವೆಯೂ ಸತತ ಮೂರು ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

Share this Article
Leave a comment