ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ರೌಡಿ ಶೀಟರ್ ಹಾಗೂ ಆತನ ಸಂಗಡಿಗರು ಮದ್ಯದ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದ್ದು, ಅರಣ್ಯ ಇಲಾಖೆಯ ಭದ್ರತಾ ವ್ಯವಸ್ಥೆ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಉದ್ಭವಿಸಿವೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿರುವ ಸತೀಶ್ (ಹಂಗಳ ಮಹದೇವಪ್ರಸಾದ್) ಎಂಬಾತ ತನ್ನ ಸಂಗಡಿಗರಾದ ಗಂಗಾಧರ್ ಹಾಗೂ ಚೇತನ್ ಅವರೊಂದಿಗೆ ಮದ್ದೂರು ವಲಯದ ಹುಲಿಕಟ್ಟೆ ಪ್ರದೇಶದಲ್ಲಿರುವ ಕಳ್ಳಬೇಟೆ ತಡೆ ಶಿಬಿರ ಸಮೀಪ ಮದ್ಯ ಸೇವಿಸಿ ಪಾರ್ಟಿ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂಬಂಧದ ಕೆಲವು ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ಸಾಮಾನ್ಯವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಅರಣ್ಯ ಪ್ರದೇಶದಲ್ಲಿ, ಅದರಲ್ಲೂ ಕಳ್ಳಬೇಟೆ ತಡೆ ಶಿಬಿರದ ಸಮೀಪ ಇಂತಹ ಚಟುವಟಿಕೆಗಳು ನಡೆದಿರುವುದು ಅರಣ್ಯ ಇಲಾಖೆಯ ಭದ್ರತಾ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವನ್ಯಜೀವಿಗಳ ಮುಕ್ತ ಸಂಚಾರವಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಬೇಕಾದ ಅಧಿಕಾರಿಗಳು ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಕಾಡಿನಲ್ಲಿ ಒಣಗಿದ ಸೌದೆ ಸಂಗ್ರಹಿಸಲು ಹೋಗುವ ರೈತರು ಹಾಗೂ ಬುಡಕಟ್ಟು ಜನರ ವಿರುದ್ಧ ಪ್ರಕರಣ ದಾಖಲಿಸುವ ಅರಣ್ಯ ಇಲಾಖೆ, ಕ್ರಿಮಿನಲ್ ಹಿನ್ನೆಲೆಯುಳ್ಳವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಕೆ ಏಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.
—–ಕೋಟ್—-
ನಿಷೇಧಿತ ಪ್ರದೇಶಕ್ಕೆ ಹೋಗಲು ಅನುಮತಿ ಕೊಟ್ಟವರು ಯಾರು, ಅಲ್ಲಿಗೆ ಯಾವ ವಾಹನದಲ್ಲಿ ಹೋಗಿದ್ದಾರೆ. ಅ ಸಂದರ್ಭದಲ್ಲಿ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ.
|ರಾಜಗೋಪಾಲ್, ಪರಿಸರ ಪ್ರೇಮಿ
—–ಕೋಟ್—
ಕಾಡಿನೊಳಗೆ ಅತಿಕ್ರಮಣ ಪ್ರವೇಶ ಹಾಗೂ ನಿಯಮಾನುಸಾರ ಅನುಮತಿ ಪಡೆಯದಿರುವುದರಿಂದ ಚಿತ್ರದಲ್ಲಿರುವ ಮೂವರ ಮೇಲೆ ಅರಣ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು.
|ನಂದೀಶ್ , ಬಂಡೀಪುರ ಹುಲಿ ಯೋಜನೆ ನಿರ್ದೇಶಕ