ಇನ್ನೂ ಮುಂದೆ ಗುರುತಿನ ಚೀಟಿ ಇಲ್ಲದಿದ್ದರೆ ಬಾರ್ ಗಳಿಗೆ ಪ್ರವೇಶವಿಲ್ಲ

ಮಣಿಕಂಠ ಜನತಾ ರಾಯಭಾರಿ
2 Min Read

ಬೆಂಗಳೂರು: ರಾಜ್ಯದ ಎಲ್ಲಾ ಪಬ್‌ಗಳು, ಬ್ರೂವರೀಸ್, ಬಾರ್‌, ಕ್ಲಬ್‌ಗಳು, ಲಾಂಜ್, ರೆಸ್ಟೋರೆಂಟ್ ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 4,093 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇತ್ತೀಚಿನ ಅಧ್ಯಯನವು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.33 ಜನರು ಮದ್ಯಪಾನಕ್ಕೆ ದಾಸರಾಗಿದ್ದಾರೆ. ಸುಮಾರು ಶೇ.18 ರಷ್ಟು ಜನರು ತಂಬಾಕು ವ್ಯಸನಕ್ಕೆ ಒಳಗಾಗಿರುವುದು ಆತಂಕವನ್ನು ಉಂಟುಮಾಡಿದೆ ಎಂದರು.

ಮದ್ಯಪಾನವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷ ಎಂದು ವರದಿಯಾಗಿದೆ. ಕೆಲವು ಪ್ರಕರಣಗಳಲ್ಲಿ 8 ವರ್ಷಕ್ಕೇ ಮಕ್ಕಳು ಮದ್ಯಪಾನ ಆರಂಭಿಸಿರುವುದೂ ದಾಖಲಾಗಿದೆ. ಇದು ಕೇವಲ ಪರವಾನಗಿ ಸಮಸ್ಯೆಯಲ್ಲ. ಇದು ಯುವ ಸುರಕ್ಷತೆ ಮತ್ತು ಸಾರ್ವಜನಿಕ-ಆರೋಗ್ಯದ ವಿಚಾರ. ಮದ್ಯ ಮಾರಾಟ ಮಾಡುವ ಎಲ್ಲ ಸಂಸ್ಥೆಗಳು ಗ್ರಾಹಕರ ಪ್ರವೇಶ ಮತ್ತು ಮದ್ಯ ಪೂರೈಕೆಯ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದರು.

ಮುಂದಿನ ದಿನಗಳಲ್ಲಿ ಮಾನ್ಯವಾದ ಗುರುತಿನ ಚೀಟಿ ಇಲ್ಲದಿದ್ದರೆ, ಪ್ರವೇಶವನ್ನು ನಿಷೇಧಿಸಬೇಕು. ಸರ್ಕಾರ ನೀಡಿದ ವಯಸ್ಸಿನ ಪುರಾವೆ ಕಡ್ಡಾಯ. ಅಪ್ರಾಪ್ತ ವಯಸ್ಕರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು. ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರೇ ಹೊಣೆಗಾರರಾಗುತ್ತಾರೆ. ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕಾರ್ಯನಿರ್ವಹಿಸಬೇಕು ಮತ್ತು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಸೂಚನೆ ನೀಡಿದರು.

ಸಂಸ್ಥೆಗಳು, ಆರ್‌ಡಬ್ಲ್ಯೂಎಗಳು ಮತ್ತು ನಾಗರಿಕ ಗುಂಪುಗಳೊಂದಿಗೆ ಪೊಲೀಸ್ ಸಮನ್ವಯ ಸಾಧಿಸಬೇಕು. ವಾಣಿಜ್ಯ ಲಾಭಕ್ಕಾಗಿ ನಮ್ಮ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಕರ್ನಾಟಕವು ಅದಕ್ಕೆ ಅವಕಾಶ ಕೊಡುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅನುಸರಿಸುತ್ತದೆ. ಅದರಂತೆ ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶವಿಲ್ಲ, ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಅಪರಾಧ ಎಂಬುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

 

Share this Article
Leave a comment