ಪ್ರಸ್ತುತ ಸಾಮಾಜಿಕ ಜಾಲತಾಣ (ಸೋಶಿಯಲ್ ಮೀಡಿಯಾ) ಬಳಕೆಯ ಕುರಿತು ನಾನು ಗಮನಿಸುತ್ತಿರುವಾಗ ನನ್ನಲ್ಲೇ ಒಂದು ದೊಡ್ಡ ಪ್ರಶ್ನೆ ಮೂಡುತ್ತದೆ. ಅದು ಕೆಲವೊಮ್ಮೆ ನಿಮ್ಮಲ್ಲೂ ಸಹ ಮೂಡಬಹುದು . ಏನಪ್ಪಾ ಅಂತ ಪ್ರಶ್ನೆ ಅಂತೀರಾ…? ಏನಂದರೆ ನಾವು ಸೋಶಿಯಲ್ ಮೀಡಿಯಾನ ಬಳಸುತ್ತಿದ್ದೇವಾ? ಅಥವಾ ಸೋಶಿಯಲ್ ಮೀಡಿಯಾ ನಮ್ಮನ್ನು ಬಳಸುತ್ತಿದೆಯೇ? ಎನಿಸುತ್ತದೆ.
ಅತ್ಯಂತ ವೇಗವಾಗಿ ಸಾಗುತ್ತಿರುವ ತಂತ್ರಜ್ಞಾನ ಕಾಲದ ಮಕ್ಕಳಂತೂ, ಮೊಬೈಲ್ ಇಲ್ಲದೇ ಊಟ ತಿಂಡಿ ಏನನ್ನು ಮಾಡುವುದಿಲ್ಲವೇನೋ. ಅಂತಹ ಪರಿಸ್ಥಿತಿ ಈಗ ಪ್ರತಿಯೊಂದು ಮನೆಯಲ್ಲೂ ನಿರ್ಮಾಣವಾಗಿದೆ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡವರು, ದೇವರು ಅಥವಾ ತಂದೆ-ತಾಯಿಗಳ ಪೋಟೋ ನೋಡುವ ಬದಲು ಇಂದು ಮೊಬೈಲ್ ಮುಖ ನೋಡುವಂತಾಗಿದೆ.ಅದರಲ್ಲೂ instagram, facebook, youtube ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿ, ರಾತ್ರಿ ಪೂರ್ತಿ ಮೊಬೈಲ್ ಸ್ಕ್ರೀನ್ ಸ್ವೈಪ್ ಮಾಡುವುದೇ ಇತ್ತೀಚಿನ ಯುವಜನರ ಮನಸ್ಥಿತಿಯಾಗಿದೆ.
ಇಂತಹ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೇ ನನಗಂತೂ ಆತಂಕ ಉಂಟಾಗುತ್ತದೆ. ಇಂದಿನ ಯುವಕರು ಎತ್ತ ಸಾಗುತ್ತಿದ್ದಾರೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಆದರೆ ಇದು ನಮ್ಮ ಜೀವನದಲ್ಲೂ ನಡೆಯುತ್ತಿರುವ ನೈಜ ಸ್ಥಿತಿಯಾಗಿದೆ. ಇಂದಿನ ಪೀಳಿಗೆಯವರು ಹಲವಾರು ರೀತಿಯ ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ. ಅದರಲ್ಲೂ ಕೆಲವರು ಈ ಸಾಮಾಜಿಕ ಜಾಲತಾಣಗಳಿಂದಲೇ ಉತ್ತಮವಾದ ಜೀವನ ಕಟ್ಟಿಕೊಳಂಡವರು ಇದ್ದಾರೆ. ಹೆಚ್ಚಿನವರು ಸಾಮಾಜಿಕ ಜಾಲತಾಣಗಳ ಗೀಳಿಗೆ ಸಿಕ್ಕಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಹಾಗಾದರೆ ಸೋಶಿಯಲ್ ಮೀಡಿಯಾನೆ ಕೆಟ್ಟದ್ದ, ಅದನ್ನ ಬಳಸಬಾರದ? ಎಂದು ನೀವು ನನ್ನನ್ನು ಕೇಳಬಹುದು. ಖಂಡಿತಾ ಇಲ್ಲ. ಸೋಶಿಯಲ್ ಮೀಡಿಯಾ ಕೆಟ್ಟದ್ದಲ್ಲ, ನಾವು ಬಳಸುವ ರೀತಿ ಕೆಟ್ಟದ್ದು. ಅತಿಯಾದರೆ ಅಮೃತವು ವಿಷವಂತೆ ಹಾಗೆಯೇ ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ ನಮಗೆ ಹಾಗೂ ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ. ಸೋಶಿಯಲ್ ಮೀಡಿಯಾದಿಂದ ದೂರದ ಸ್ನೇಹಿತರೊಂದಿಗೆ ಸಂಪರ್ಕ ಬೆಸೆಯಬಹುದಾಗಿದೆ, ಕೆಲವೊಂದು ಗೊತ್ತಿಲ್ಲದ ವಿಷಯವನ್ನು ತಿಳಿಯಬಹುದು, ಇದೇ ಸಾಮಾಜಿಕ ಜಾಲತಾಣಗಳು ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆಯೂ ಆಗುತ್ತದೆ. ಬೇರೆ ಬೇರೆ ರೀತಿಯಾಗಿ ನಮ್ಮ ಮೇಲೆ ಸಕರಾತ್ಮಕ ಪ್ರಭಾವವನ್ನು ಬೀರುತ್ತವೆ.
ಅದರಂತೆಯೇ ಸೋಶಿಯಲ್ ಮೀಡಿಯದಿಂದ ನಕಾರಾತ್ಮಕ ಪರಿಣಾಮವನ್ನು ನಾವು ನೋಡಬಹುದಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ನಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗುವುದರಿಂದ ಅವರ ಗಮನ ಓದುವ ಕಡೆ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಅಧಿಕ ಒತ್ತಡ ಉಂಟಾಗುತ್ತದೆ. ನಿದ್ರೆ ಕೊರತೆ ಸಮಸ್ಯೆಗಳು ಸಾಮಾಜಿಕ ಜಾಲತಾಣದಿಂದ ಉಂಟಾಗಬಹುದು. ಇನ್ನು ಹತ್ತು ಹಲವಾರು ಸಮಸ್ಯೆಗಳು ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಉಂಟಾಗುತ್ತದೆ.
ಹಾಗಾದರೆ ಸೋಶಿಯಲ್ ಮೀಡಿಯ ನಮಗೆ ಸಮಸ್ಯೆನಾ…..? ಇಲ್ಲ ಸೋಶಿಯಲ್ ಮೀಡಿಯಾ ಸಮಸ್ಯೆಯಲ್ಲ ಅತಿಯಾಗಿ ಬಳಕೆ ಮಾಡುವುದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಸೀರೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳು ಸೀರೆಯ ಮೇಲೆ ಬಿದ್ದರೂ ಹರಿಯುವುದು ಸೀರೆಯೇ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಾಗೆಯೇ ಸೋಶಿಯಲ್ ಮೀಡಿಯವನ್ನ ಬಳಸುವುದರಿಂದ ಕೇವಲ ನಮಗೆ ಮಾತ್ರ ಸಮಸ್ಯೆ ಉಂಟಾಗುವುದು.
ಅದಕ್ಕಾಗಿ ನಾವು ಸೋಶಿಯಲ್ ಮೀಡಿಯಾ ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದರ ಮೇಲೆ ಸೋಶಿಯಲ್ ಮೀಡಿಯಾ ಒಳ್ಳೆಯದಾ ಅಥವಾ ಕೆಟ್ಟದ್ದು ಎಂಬುದು ನಿರ್ಧಾರವಾಗುತ್ತದೆ. ಒಟ್ಟಾರೆಯಾಗಿ ನಾವು ಸಾಮಾಜಿಕ ಜಾಲತಾಣವನ್ನು ಬಳಸೋಣ, ಆದರೇ ನಮ್ಮನ್ನೇ ಸಾಮಾಜಿಕ ಜಾಲತಾಣ ಬಳಸುವಂತೆ ಮಾಡಿಕೊಳ್ಳಬಾರದು ಎಂಬುದನ್ನು ಅರಿತುಕೊಳ್ಳೋಣ.
ಲೇಖಕರು: ಬಿ.ಚಂದನ, ಪತ್ರಿಕೋದ್ಯಮ ವಿದ್ಯಾರ್ಥಿನಿ