*ಒಂದು ವರ್ಷದಲ್ಲೇ 62.08 ಲಕ್ಷ ವಹಿವಾಟು, 4.76 ಲಕ್ಷ ನಿವ್ವಳ ಲಾಭ
*ಬೋನಸ್ 2.24 ಲಕ್ಷ – 48 ವರ್ಷದ ಕನಸು ನನಸು: ಅಧ್ಯಕ್ಷ ಶ್ರೀಕಂಠಸ್ವಾಮಿ
ಚಾಮರಾಜನಗರ, ಸೆ.8: ಹಸುಗಳಿಗೆ ಮೇವು ನೀಡುವ ಮೂಲಕ ಕೋಡಿಉಗನೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ 2025-26ನೇ ಸಾಲಿನ ಪ್ರಥಮ ವಾರ್ಷಿಕ ಸಾಮಾನ್ಯ ಸಭೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಉದ್ಘಾಟಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನೋದನ್ ಪ್ರಶಾಂತ್ ಅವರು 2025-26ನೇ ಸಾಲಿನ ಆಡಿಟ್ ವರದಿ ಮಂಡಿಸಿ, ಅನುಮೋದನೆ ಪಡೆದರು.
ಒಂದು ವರ್ಷದ ಸಾಧನೆ: ಕೇವಲ ಒಂದು ವರ್ಷದಲ್ಲಿ ಸಂಘವು 62.08 ಲಕ್ಷ ರೂ.ಗಳ ಹಾಲು ಖರೀದಿ ಮಾಡಿದೆ. 4.76 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 2.24 ಲಕ್ಷ ರೂ. ಬೋನಸ್ ವಿತರಿಸಲಾಗುತ್ತದೆ. ಇದು ನಿಮ್ಮ ಒಗ್ಗಟ್ಟು ಮತ್ತು ಪಾರದರ್ಶಕತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
ನಿರ್ದೇಶಕ ಎಚ್.ಎಸ್. ಬಸವರಾಜು (ಚಾಮುಲ್ ಕುದೇರು) ಮಾತನಾಡಿ ಕೇವಲ ಒಂದೇ ವರ್ಷದಲ್ಲಿ ಇಷ್ಟು ಲಾಭ ಪಡೆದಿರುವ ಈ ಉತ್ಪಾದಕರ ಸಂಘ ಸಂಘಟಿಸಿರುವುದು ಹೆಮ್ಮೆ ಪಡುವಂತಹ ವಿಷಯ. ಈ ಹಿಂದೆ ಈ ಗ್ರಾಮದ ರೈತರು ನೆರೆ ಗ್ರಾಮಕ್ಕೆ ಹೋಗಿ ಹಾಲು ಹಾಕಬೇಕಾಗಿತ್ತು. ಆದರೆ ಇದೀಗ ನಿಮ್ಮ ಗ್ರಾಮದಲ್ಲೇ ಸಂಘ ಇರುವುದರಿಂದ ಇನ್ನು ಹೆಚ್ಚಿನ ಉತ್ಪಾದನೆಗೆ ಅವಕಾಶವಾಗಿದೆ. ರಾಜ್ಯದಲ್ಲಿ 16 ಒಕ್ಕೂಟಗಳಿವೆ. ರೈತರಿಗೆ ಅನುಕೂಲವಾಗುವ ಉಪಕರಣಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ಹಾಲಿಗೆ ಪ್ರೋತ್ಸಾಹಧನ ಮತ್ತು ಹೆಚ್ಚಿನ ದರ ನೀಡಲು ಕ್ರಮ ವಹಿಸಲಾಗುವುದು. ಗುಣಮಟ್ಟದ ಹಾಲನ್ನು ಪೂರೈಸಿ ಎಂದರು.

ನಾಮನಿರ್ದೇಶಕ ಕೆ.ಕೆ.ರೇವಣ್ಣ ಮಾತನಾಡಿ, ಗುಣಮಟ್ಟದ ಹಾಲು ಪೂರೈಸಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಹೈನುಗಾರಿಕೆಯನ್ನು ಅವಲಂಬಿಸಬೇಕು. ವಿಮೆ ಮಾಡಿಸಬೇಕು. ಈ ಸಂಘಕ್ಕೆ ಇನ್ನು ಹೆಚ್ಚಿನ ಲಾಭ ಬರಲಿ. ನನ್ನ ಅನುದಾನದಲ್ಲಿ ಸ್ವಂತ ಕಟ್ಟಡಕ್ಕೆ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಕೆ ಮಾತನಾಡಿ, ಸಂಘಗಳು ಲಾಭದಾಯಕವಾಗಿ ಸಾಗಲು ಪಾರದರ್ಶಕತೆ ಮತ್ತು ಒಗ್ಗಟ್ಟು ಮುಖ್ಯ. ಮುಂದೆ ಒಕ್ಕೂಟದಿಂದ ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ, ಮೇವು ಕಟಾವು ಯಂತ್ರ ಎಲ್ಲವನ್ನೂ ಸಹಾಯಧನದಲ್ಲಿ ನೀಡಲಾಗುವುದು. ನಮ್ಮ ಜಿಲ್ಲೆಯ ಹಾಲು ಹೊರ ರಾಜ್ಯ ಮತ್ತು ಸೈನಿಕರಿಗೂ ಸರಬರಾಜಾಗುತ್ತಿದೆ. ಆದ್ದರಿಂದ ಚಾಮುಲ್ ಒಕ್ಕೂಟ ಲಾಭದಾಯಕವಾಗಿ ನಡೆಯುತ್ತಿದೆ. ಜೊತೆಗೆ ಇಲಾಖೆಯಿಂದ ಬರುವ ಸವಲತ್ತುಗಳು ಮತ್ತು ಹಸುಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸ್ವಂತ ಕಟ್ಟಡಕ್ಕೆ ಜಾಗ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ಸಹಕಾರ ಸಂಘ ಮಾಡಿರುವುದು ರೈತರ ಉಪಯೋಗಕ್ಕೆ ಮಾತ್ರ. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಿ. ಈ ಹಿಂದೆ ಸಾಂಪ್ರದಾಯಿಕವಾಗಿ ಹಸುಗಳನ್ನು ಸಾಕುತ್ತಿದ್ದೆವು. ಆದರೆ ಈಗ ವೈಜ್ಞಾನಿಕವಾಗಿ ವಿಷಯ ತಿಳಿದು ಹೈನುಗಾರಿಕೆಗೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, 48 ವರ್ಷಗಳ ಕಾಲ ನಾವು ನೆರೆ ಗ್ರಾಮಕ್ಕೆ ಹೋಗಬೇಕಿತ್ತು. ಮಾಹಿತಿ ಕೊರತೆಯಿಂದ ಇಲ್ಲಿಯವರೆಗೆ ಸಹಕಾರ ಸಂಘ ಮಾಡಲು ಸಾಧ್ಯವಾಗಿರಲಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಈಗ ಸಂಘ ಮಾಡಿದ್ದೇವೆ. ತುಂಬಾ ಅಚ್ಚುಕಟ್ಟಾಗಿ ಪಾರದರ್ಶಕವಾಗಿ ನಡೆಯುತ್ತಿದೆ. ಕೇವಲ ಒಂದೇ ವಾರದಲ್ಲಿ ಗರಿಷ್ಠ ಮಟ್ಟದ ಸದಸ್ಯತ್ವ ಆದ ಕಾರಣ ಬೇಗನೆ ಸಂಘವಾಯಿತು. ಏನೇ ಇದ್ದರೂ ಒಗ್ಗಟ್ಟಿನಿಂದ ಸಲಹೆ ಸೂಚನೆ ನೀಡಿ ಪಾರದರ್ಶಕತೆಯಿಂದ ಸಾಗೋಣ. ಹೈನುಗಾರಿಕೆಯಿಂದ ನಿಮ್ಮೆಲ್ಲರ ಜೀವನ ಸುಖವಾಗಿ ಸಾಗಲಿ ಎಂದು ಹಾರೈಸಿದರು.
ರೈತರ ಮನವಿ:ಸಭೆಯಲ್ಲಿ ರೈತ ಅಲೋಕ್ ಅವರು ಮೇವಿನ ಹಗರಣ, ವಿಮೆ ಬಗ್ಗೆ, ವೈದ್ಯರನ್ನು ಸರಿಯಾದ ಸಮಯಕ್ಕೆ ಕಳುಹಿಸಿ ಎಂದು ಮನವಿ ಮಾಡಿದರು. ರೈತ ರಾಘು ಅವರು ಹಿಂದೆ ಇದ್ದ ಒಕ್ಕೂಟದ ಲಾಭಾಂಶವನ್ನು ನಮ್ಮ ಗ್ರಾಮಕ್ಕೂ ಕೊಡಿ, ಬರ ಇರುವ ಕಾರಣ ಮೇವನ್ನು ಒದಗಿಸಿ, ಜಂತುಹುಳು ನಿವಾರಣೆ ಲಸಿಕೆ ಕೊಡಿ, ಪಶು ಆಹಾರವನ್ನು ಗುಣಮಟ್ಟದಲ್ಲಿ ಕೊಡಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ರೈತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಅಮರ್, ಶರತ್, ಶ್ಯಾಮ್ ಸುಂದರ್ ಹೆಚ್.ಪಿ, ಭಾಗ್ಯರಾಜ್ ಪಿ.ಎಂ, ಕಾಂತರಾಜು, ಮನೋಜ್, ಸತೀಶ್, ಉಪಾಧ್ಯಕ್ಷ ಪಿ.ಮಹೇಶ್, ನಿರ್ದೇಶಕರುಗಳು,ಹಾಲು ಉತ್ಪಾದಕರು,ಕೋಡಿಉಗನೆ ಮತ್ತು ಬೇವಿನತಾಳಪುರದ ಯಜಮಾನರುಗಳು, ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.