ಕಾಂಗ್ರೆಸ್ ಜನಪರ ಯೋಜನೆಗಳನ್ನು ಜನತೆಗೆ ನೆನಪಿಸಿ- ಎ.ಆರ್.ಕೃಷ್ಣಮೂರ್ತಿ

ಮಣಿಕಂಠ ಜನತಾ ರಾಯಭಾರಿ
3 Min Read

*ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ 

*ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ 

ಚಾಮರಾಜನಗರ, ಸೆ.20: ನಮ್ಮ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ಜನರಿಗೆ ನೆನಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡುವ ಮೂಲಕ ಸದೃಢವಾಗಿ ಪಕ್ಷವನ್ನು ಕಟ್ಟಬೇಕಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ಮಾಡಲಾಗಿದೆ ಎಂದು ವರಿಷ್ಠರು ಹೇಳಿದ್ದಾರೆ. ಜಿಲ್ಲಾಧ್ಯಕ್ಷರ ಬದಲಾವಣೆ ಮೊದಲ ಪ್ರಕ್ರಿಯೆಯಾಗಿದ್ದು, ಮುಂದಿನ ದಿನಗಳಲ್ಲಿ ಬ್ಲಾಕ್ ಅಧ್ಯಕ್ಷರು ಬದಲಾವಣೆಯಾಗಲಿದ್ದಾರೆ. ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ದೊರೆಯಲಿದೆ ಎಂದರು.

ನೂತನ ಜಿಲ್ಲಾಧ್ಯಕ್ಷರಾದ ಯೋಗೇಶ್ ಅವರು ಪಕ್ಷದ ನಿಯಮಾನುಸಾರ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ಮಾಡಿ, ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಚುನಾವಣೆಗಳಿಗೆ ಪ್ರತಿಯೊಬ್ಬರಿಗೂ ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಪರವಾಗಿ ಇರುವ ಜನರ ಭಾವನೆಯನ್ನು ಸದುಪಯೋಗಪಡಿಸಿಕೊಂಡು ಮುಂದೆಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ತಿಳಿಸಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ರಾಜುಗೌಡ, ಬೆಂಕಿ ಮಹದೇವಪ್ಪ, ಎಚ್.ಎಸ್.ಮಹದೇವಪ್ರಸಾದ್, ಪುಟ್ಟಸ್ವಾಮಿ ಹಾಗೂ ಹಲವಾರು ಹಿರಿಯ ರಾಜಕಾರಣಿಗಳು ಪಕ್ಷವನ್ನು ಸದೃಢವಾಗಿ ಕಟ್ಟಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದಿಕ್ಕಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ಕಾಡಾ ಅಧ್ಯಕ್ಷ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಪ್ರಬಲ ನಾಯಕತ್ವ ಗುಣದಿಂದ ನಾನು ಯಶಸ್ವಿಯಾಗಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನಿರ್ವಹಿಸಲು ಸಾಧ್ಯವಾಯಿತು‌. ನಮ್ಮ ಕುಟುಂಬ ಕಾಂಗ್ರೆಸ್ ಗೆ ಬಂದು 50 ವರ್ಷಗಳು ಕಳೆದಿದ್ದು, ಇಂತಹ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಎಂಬುದಕ್ಕೆ ಹೆಮ್ಮೆಯಾಗುತ್ತದೆ. ನನಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಕಾರ ನೀಡಿದ ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧ್ಯಕ್ಷರಾದವರು ತಾಳ್ಮೆ ಮತ್ತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜಾತ್ಯಾತೀತವಾಗಿ ಪಕ್ಷವನ್ನು ಸದೃಢವಾಗಿ ಕಟ್ಟಬೇಕು. ಪಕ್ಷವನ್ನು ತಾಯಿಯ ಸಮಾನವಾಗಿ ನೋಡಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.

ನೂತನ ಜಿಲ್ಲಾಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ನನ್ನ ತಂದೆ ವಿಧಾನ ಪರಿಷತ್ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ.ನಾನು ಕೂಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ವರಿಷ್ಠರು ನೀಡಿರುವ ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಹೋಗುತ್ತೇನೆ. ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ನನಗೆ ಸಲಹೆ ಮತ್ತು ಸಹಕಾರವನ್ನು ನೀಡಬೇಕು. ಈ ಮೂಲಕ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನಾ, ಬ್ಲಾಕ್ ಅಧ್ಯಕ್ಷರಾದ ಹೊಂಗನೂರು ಚಂದ್ರು, ಮಹೇಂದ್ರ ವರ್ಮ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷ ನಾಗರತ್ನ, ತೋಟೇಶ್, ಚಿನ್ನಮ್ಮ, ಸೋಮನಾಯಕ, ಡಾ.ಮಹದೇವಯ್ಯ ಸಯ್ಯದ್ ರಫಿ, ಬಿ.ಕೆ.ರವಿಕುಮಾರ್, ಆರ್.ಮಹದೇವ್, ಚಿಕ್ಕ ಮಹದೇವ್, ಕೆರೆಹಳ್ಳಿ ನವೀನ್, ನಂಜುಂಡಸ್ವಾಮಿ ಕಂದಹಳ್ಳಿ, ಯೋಗೇಶ್, ಗೌಡಹಳ್ಳಿ ರಾಜೇಶ್, ನಗರಸಭೆ ಮಾಜಿ ಸದಸ್ಯ ಮಹದೇವಯ್ಯ, ಸೇವಾದಳದ ಅಧ್ಯಕ್ಷ ಹೊಂಗನೂರು ಜಯರಾಜ್, ಸಾಹಿತಿ ಸಿದ್ದರಾಜು, ಎಸ್.ಸಿದ್ದರಾಜು, ಗೋವಿಂದರಾಜು ಹೆಬ್ಬಸೂರು, ಪ್ರಸಾದ್ ಕಾಡು ಹಾಗೂ ಇತರರು ಹಾಜರಿದ್ದರು.

 

Share this Article
Leave a comment