ಮಂಡ್ಯ: ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿಯ ಮನೆ ಹಾಗೂ ಫಾರಂ ಹೌಸ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ಮನೆ ಹಾಗೂ ಅವಸರಹಳ್ಳಿ ಫಾರಂ ಹೌಸ್ ಮೇಲೆ ದಾಳಿ ನಡೆದಿದೆ. ಬಿಸಿಎಂ ಹಾಸ್ಟೆಲ್‌ನ ನಿವೃತ್ತ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಹಾಗೂ ಫಾರಂ ಹೌಸ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಮದ್ದೂರಿನಲ್ಲಿ ಶಿವರಾಜು ನಿವೃತ್ತರಾಗಿದ್ದರು ಎನ್ನಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿ ವೇಳೆ ಮನೆಯಲ್ಲಿ ದುಬಾರಿ ಮದ್ಯದ ಬಾಟಲಿಗಳು, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳು ಹಾಗೂ ಪತ್ತೆಯಾಗಿರುವ ವಸ್ತುಗಳ ಪರಿಶೀಲನೆ ಮುಂದುವರಿದಿದೆ.