ಡಿಕೆಶಿ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ; ಬರ, ಪಂಚಾಯತ್ ಚುನಾವಣೆ, ಗ್ಯಾರಂಟಿ ಬಗ್ಗೆ ಮಹತ್ವದ ಚರ್ಚೆ

ಮಣಿಕಂಠ ಜನತಾ ರಾಯಭಾರಿ
2 Min Read

ಬೆಂಗಳೂರು, ಸೆ. 23: ವಿಶೇಷ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಂಪುಟದ ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪ್ರಮುಖವಾಗಿ 4 ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ತಮ್ಮ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆ ಬಳಿಕ ಗದಗ ಜಿಲ್ಲೆಯ 3 ತಾಲೂಕುಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ರಾಜ್ಯದಲ್ಲಿ 157ಕ್ಕೂ ಹೆಚ್ಚು ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ, ಶೇ. 42ರಷ್ಟು ಮಾತ್ರ ಮಳೆಯಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಬರ ನಿರ್ವಹಣೆಗೆ 4,500 ಕೋಟಿ ರೂ. ಅಗತ್ಯವಿದೆ ಎಂದು ಚರ್ಚೆಯಾಗಿದ್ದು, ಈ ಬಗ್ಗೆ ಕೇಂದ್ರದ ಜೊತೆ ಚರ್ಚಿಸುವುದಾಗಿ ಡಿಸಿಎಂ ಮಾಹಿತಿ ನೀಡಿದ್ದಾರೆ.

ಕುಡಿಯುವ ನೀರಿಗೆ ಟ್ಯಾಂಕರ್, ತುರ್ತು ಬೋರ್‌ವೆಲ್, ಮೇವಿನ ಕಿಟ್ ವಿತರಣೆ ಮತ್ತು VB-G Ram Ji ಯೋಜನೆಯಡಿ ಉದ್ಯೋಗ ಸೃಷ್ಟಿಗೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಜಗಳೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ 2026 ರ ಡಿಸೆಂಬರ್ ಒಳಗೆ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. EVM ಬದಲು ಮತಪೆಟ್ಟಿಗೆ ಬಳಕೆಗೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಮತಪೆಟ್ಟಿಗೆ ಖರೀದಿ ಮತ್ತು Live Webcasting ಗೆ 151.31 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಶಾಸಕರಿಗೆ ಸಿಎಂ ಡಿಕೆಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಿಎಲ್ ಸಭೆಯಲ್ಲಿ ಗ್ಯಾರಂಟಿ ಸಮಿತಿ ರಚನೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸೂಚನೆ ನೀಡಲಾಯಿತು.

ಸರ್ಕಾರದ ಗೌಪ್ಯತೆ ಲೀಕ್ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ಥಿಕ ಇಲಾಖೆ ಮಾಹಿತಿ ಲೀಕ್ ಆಗಿದ್ದಕ್ಕೆ ಸಿಎಂ-ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದ್ದು, ಗೌಪ್ಯತೆ ಕಾಯದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

2028 ವಿಧಾನಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆ: 2028ರ ಚುನಾವಣೆ ಟಾರ್ಗೆಟ್ ಇಟ್ಟುಕೊಂಡು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಕೇಂದ್ರ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ. ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರ ಸಭೆಗಳು ನಡೆಯುತ್ತಿವೆ. ಒಟ್ಟಾರೆ, ಬರದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಆಡಳಿತ ಮತ್ತು ಪಕ್ಷ ಸಂಘಟನೆ ಎರಡನ್ನೂ ಸಮತೋಲನ ಮಾಡುವ ಸವಾಲು ಡಿಕೆಶಿ ಸರ್ಕಾರದ ಮುಂದಿದೆ.

Share this Article
Leave a comment