ಮೈಸೂರು: ಸರ್ಕಾರಿ ಶಾಲೆಯೊಂದನ್ನು ಮಾದರಿ ಶಾಲೆಯಾಗಿ ರೂಪಿಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ಹಗಲಿರುಳು ಶ್ರಮಿಸಿದ ಯೂಟ್ಯೂಬರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರಮ್ಯಾ ಜಗತ್ (Ramya Jagath Mysuru) ಅವರಿಗೆ ಶಾಲೆಯ ಸಭೆಯಲ್ಲಿ ಕೆಲವರು ಅವಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯಿಂದ ತೀವ್ರವಾಗಿ ನೊಂದಿರುವ ಅವರು, ಶಾಲೆಯ ಸಂಪರ್ಕವನ್ನು ಕಡಿದುಕೊಂಡು, ಎಸ್.ಡಿ.ಎಂ.ಸಿ (SDMC) ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಕಳೆದ ಐದು ತಿಂಗಳುಗಳಿಂದ ಮೈಸೂರಿನ ಕೋಟೆಹುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದ ರಮ್ಯಾ ಜಗತ್ ಅವರು, ತಮ್ಮ ಸ್ವಂತ ದುಡಿಮೆಯ ಸುಮಾರು ₹31.24 ಲಕ್ಷ ಹಣವನ್ನು ಶಾಲೆಯ ಅಭಿವೃದ್ಧಿಗೆ ವ್ಯಯಿಸಿದ್ದರು. ವಿದ್ಯಾರ್ಥಿಗಳಿಗೆ ಸೂಟು-ಬೂಟು, ಬ್ಯಾಗ್, ವಾಟರ್ ಬಾಟಲ್, ತಟ್ಟೆ-ಲೋಟಗಳ ವಿತರಣೆ. ಸ್ವಂತ ಖರ್ಚಿನಲ್ಲಿ ಯೋಗ, ಕರಾಟೆ, ವಿಜ್ಞಾನ, ಸಂಗೀತ, ನೃತ್ಯ, ಡ್ರಾಯಿಂಗ್ ಹಾಗೂ ಸ್ಪೋಕನ್ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿ ವೇತನ ನೀಡುತ್ತಿದ್ದರು.

ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಬರೋಬ್ಬರಿ 550 ಕಿ.ಮೀ ದೂರದ ಧಾರವಾಡದ ಗರಗಕ್ಕೆ ತೆರಳಿ ಕೈಮಗ್ಗದ ಧ್ವಜವನ್ನು ಶಾಲೆಗೆ ತಂದಿದ್ದರು. ತಮ್ಮ ಸ್ವಂತ ಮಗನನ್ನು ಕೂಡ ಖಾಸಗಿ ಶಾಲೆ ಬಿಡಿಸಿ ಇದೇ ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಿದ್ದರು.
ವಿವಾದಕ್ಕೆ ಕಾರಣವೇನು?: ಶಾಲೆಯಲ್ಲಿ 7ನೇ ತರಗತಿ ಮುಗಿಸಿದ ಮಕ್ಕಳಿಗೆ ಅನುಕೂಲವಾಗುವಂತೆ ಅದೇ ಶಾಲೆಯಲ್ಲೇ 8ನೇ ತರಗತಿ (ಪ್ರೌಢಶಾಲೆ) ಆರಂಭಿಸಲು ಅನುಮತಿ ಪಡೆಯುವ ಪ್ರಸ್ತಾಪವನ್ನು ಗ್ರಾಮದ ಮುಖಂಡರ ಸಭೆಯಲ್ಲಿ ರಮ್ಯಾ ಮಂಡಿಸಿದ್ದರು. ಈ ವೇಳೆ ಕೆಲ ವ್ಯಕ್ತಿಗಳು ಏಕವಚನದಲ್ಲಿ ಮಾತನಾಡಿ, “ಇಲ್ಲಿ ಹೈಸ್ಕೂಲ್ ತರಲು ನಿನಗೆ ಯಾವ ಹಕ್ಕಿದೆ? ನಮ್ಮ ಅನುಮತಿ ಇಲ್ಲದೆ ಶಾಲೆ ದತ್ತು ಪಡೆಯಲು ನಿನಗೆ ಯಾರು ಅಧಿಕಾರ ಕೊಟ್ಟರು?” ಎಂದು ತರಾಟೆಗೆ ತೆಗೆದುಕೊಂಡರು.
ಅಷ್ಟೇ ಅಲ್ಲದೆ, ಶಾಲಾ ಶಿಕ್ಷಕರನ್ನು ಏಕವಚನದಲ್ಲಿ ನಿಂದಿಸಿ, “ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇವೆ” ಎಂದು ಬೆದರಿಕೆ ಹಾಕಲಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದಕ್ಕೆ ಆಕ್ಷೇಪ!: ಶಾಲೆಯ ಸಭಾಂಗಣಕ್ಕೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇರಿಸಲಾಗಿತ್ತು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, “ನಮ್ಮ ಊರಿಗೆ ಅವರೇನು ಮಾಡಿದ್ದಾರೆ? ಯಾರನ್ನು ಕೇಳಿ ಅವರ ಹೆಸರಿಟ್ಟಿರಿ?” ಎಂದು ಪ್ರಶ್ನಿಸಿದ್ದರು.
ಇದಕ್ಕೆ ವಿಡಿಯೋ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ರಮ್ಯಾ, ಮೈಸೂರು ವಿಶ್ವವಿದ್ಯಾಲಯ, ಕೆ.ಆರ್.ಎಸ್ ಅಣೆಕಟ್ಟು, ಹೆಚ್.ಎ.ಎಲ್, ಬ್ಯಾಂಕ್‌ಗಳು, ರೈಲ್ವೆ ಸೇರಿದಂತೆ ನಾಡಿಗೆ ನಾಲ್ವಡಿಯವರು ನೀಡಿದ ನೂರಾರು ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸುತ್ತಾ, ಮಹಾರಾಜರ ಹೆಸರಿಡಲು ಇಷ್ಟೊಂದು ವಿರೋಧ ವ್ಯಕ್ತಪಡಿಸಿದ್ದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

ಶಾಲೆಯಿಂದ ಹೊರಬಂದ ರಮ್ಯಾ: ಮನಸ್ಸಿಗೆ ಆದ ತೀವ್ರ ಆಘಾತದಿಂದಾಗಿ ಶಾಲೆಯಿಂದ ಹೊರಬರುವ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ ರಮ್ಯಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಮಗನ ಟಿ.ಸಿ (TC) ಗೂ ಅರ್ಜಿ ಸಲ್ಲಿಸಿದ್ದಾರೆ. ಮುಂದೆಯೂ ಸರ್ಕಾರಿ ಶಾಲೆಗಳಿಗಾಗಿ ಸೇವೆ ಸಲ್ಲಿಸುವುದಾಗಿ ಹೇಳಿದ ಅವರು, “ಒಳ್ಳೆಯ ಕೆಲಸ ಮಾಡುವಾಗ ಪ್ರೋತ್ಸಾಹ ನೀಡದಿದ್ದರೂ ಪರವಾಗಿಲ್ಲ, ಆದರೆ ಈ ರೀತಿಯಾಗಿ ಅವಮಾನ ಮಾಡುವುದು ಸರಿಯಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.