ಚಾಮರಾಜನಗರ, ಸೆ. 22: ಚಾಮರಾಜನಗರ ದಸರಾ ಮಹೋತ್ಸವ 2026 ಅನ್ನು ಸರ್ಕಾರದ ವತಿಯಿಂದಲೇ ಅದ್ಧೂರಿಯಾಗಿ ಆಚರಿಸಬೇಕು ಎಂದು ಒತ್ತಾಯಿಸಿ ಇಂದು ಜಿಲ್ಲಾ ಕಲಾವಿದರ ಬಳಗ, ಜಿಲ್ಲಾ ಯುವಕರ ಬಳಗ, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಸಂಸ್ಥೆ ಹಾಗೂ ಭೀಮಸೇನೆ ಕರ್ನಾಟಕ ಜಿಲ್ಲಾ ಘಟಕ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಾಮರಾಜನಗರ ದಸರಾಕ್ಕೆ 10 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. 2013 ರಲ್ಲಿ ದಿ. ಎಚ್.ಎಸ್. ಮಹದೇವಪ್ರಸಾದ್, ದಿ. ಆರ್.ಧ್ರುವನಾರಾಯಣ ಮತ್ತು ದಿ. ವಿ.ಶ್ರೀನಿವಾಸಪ್ರಸಾದ್ ಅವರ ಸಾರಥ್ಯದಲ್ಲಿ ಚಾಮರಾಜನಗರ ದಸರಾ ಆರಂಭವಾಗಿತ್ತು. ಚಾಮರಾಜನಗರಕ್ಕೆ ಎರಡು ಶತಮಾನಗಳ ಇತಿಹಾಸವಿದ್ದು, ಮೈಸೂರು ಅರಸರ ತವರು ನೆಲ ಇದಾಗಿದೆ.
ಆದರೆ ಕಳೆದ ವರ್ಷದಿಂದ ಸರ್ಕಾರ “ಮೈಸೂರು ದಸರಾದ ಮಹತ್ವ ಕಡಿಮೆಯಾಗುತ್ತದೆ” ಎಂಬ ಕಾರಣ ನೀಡಿ ಚಾಮರಾಜನಗರ ದಸರಾವನ್ನು ರದ್ದುಗೊಳಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಸರಾ ನಡೆಯುತ್ತಿದ್ದು, ಚಾಮರಾಜನಗರದಲ್ಲಿ ಮಾತ್ರ ನಡೆಯುತ್ತಿಲ್ಲ. ಬರ ಇದ್ದರೆ ಎಲ್ಲಾ ಕಡೆ ನಿಲ್ಲಲಿ, ಇಲ್ಲದಿದ್ದರೆ ಎಲ್ಲಾ ಕಡೆ ನಡೆಯಲಿ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು.
ದಸರಾ ನಡೆಯದ ಕಾರಣ ಜಿಲ್ಲೆಯ ಸುಮಾರು 300 ಕ್ಕೂ ಹೆಚ್ಚು ಕಲಾತಂಡಗಳು, 3500 ಕ್ಕೂ ಹೆಚ್ಚು ಕಲಾವಿದರು ವೇದಿಕೆಯಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಚಾಮರಾಜನಗರ ದಸರವನ್ನು ಸರ್ಕಾರವೇ ಆಚರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಜನಶಕ್ತಿ ಸುರೇಶ್, ಭೀಮ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಶಾಂತರಾಜು, ಜಿಲ್ಲಾ ಕಾರ್ಯಧ್ಯಕ್ಷ ಕಲೆ ನಟರಾಜು,ಶಿವಶಂಕರ ಎನ್ ಚಟ್ಟು,ಶಿವಕುಮಾರ್ ಜನ್ನೂರು ಹೊಸೂರು, ಎಚ್ ಎಮ್ ಶಿವಣ್ಣ ಮಂಗಲ ಹೊಸೂರು, ರಂಗಸ್ವಾಮಿ, ರಮೇಶ್ ದಡದಹಳ್ಳಿ , ಜೆಬಿ ಮಹೇಶ್, ಗೌರಿಶಂಕರ್, ಗುರುರಾಜು ತಮ್ಮಡಹಳ್ಳಿ, ನಟರಾಜ್ ಹರದನಹಳ್ಳಿ ಹಾಗೂ ನಾಲ್ಕು ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.