ಹನೂರು, ಸೆ.23: ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ನಾಲ್ಕು ಮೇಕೆಗಳನ್ನು ಕೊಂದು ಹಾಕಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ಗ್ರಾಮದ ಶಿವಮ್ಮ, ಗಂಡ ಚೆನ್ನೇಗೌಡ ಎಂಬುವರಿಗೆ ಸೇರಿದ 4 ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಬೆಳಗಿನ ಜಾವ ಮೇಕೆಗಳು ಕೊಟ್ಟಿಗೆಯಲ್ಲಿದ್ದಾಗ ದಾಳಿ ಮಾಡಿ ಕೊಂದು ಹಾಕಿ ಪರಾರಿಯಾಗಿದೆ. ಬೆಳಿಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಡಿ.ಆರ್.ಓ ನಂದೀಶ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ: ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಈಗಾಗಲೇ ಹಲವು ಜಾನುವಾರುಗಳ ಮೇಲೆ ದಾಳಿ ನಡೆದಿದೆ. ಆದ್ದರಿಂದ ಕೂಡಲೇ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಅಳವಡಿಸಬೇಕು ಮತ್ತು ಮೃತ ಮೇಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಕಾಲು ಗುರುತುಗಳ ಪರಿಶೀಲನೆ ನಡೆಸುತ್ತಿದ್ದಾರೆ.