ಚಾಮರಾಜನಗರ ದಸರಾ ನಡೆಸುವಂತೆ ಆಗ್ರಹಿಸಿ ಕಲಾವಿದರ ಅನಿರ್ದಿಷ್ಟಾವಧಿ ಧರಣಿ

ಮಣಿಕಂಠ ಜನತಾ ರಾಯಭಾರಿ
2 Min Read

ಸಾಂಸ್ಕೃತಿಕ ಹಕ್ಕು ಮರಳಿ ನೀಡಿ; ಬರದ ನೆಪ ಹೇಳಬೇಡಿ:  ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಚಾಮರಾಜನಗರ, ಸೆ.28: ಚಾಮರಾಜನಗರ ದಸರಾ ಮಹೋತ್ಸವವನ್ನು ಈ ಬಾರಿ ಕಡ್ಡಾಯವಾಗಿ ಆಯೋಜಿಸಬೇಕು, ಜಾನಪದ ಹಾಗೂ ಸ್ಥಳೀಯ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಮತ್ತು ದಸರಾ ಮಹೋತ್ಸವಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ಜಿಲ್ಲಾ ಕಲಾವಿದರ ಬಳಗ, ಜಿಲ್ಲಾ ಯುವ ಕಲಾವಿದರ ಬಳಗ ಹಾಗೂ ಜಿಲ್ಲಾ ಕಲಾತಂಡಗಳ ಒಕ್ಕೂಟದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ಕಳೆದ ವರ್ಷ ದಸರಾ ಮಹೋತ್ಸವ ನಡೆಯದ ಹಿನ್ನೆಲೆಯಲ್ಲಿ ಕಲಾವಿದರು ಹಾಗೂ ವಿವಿಧ ಕಲಾತಂಡಗಳಿಗೆ ನಷ್ಟವಾಗಿದೆ. ಈ ಬಾರಿ ಬರದ ನೆಪವೊಡ್ಡಿ ದಸರಾ ಮಹೋತ್ಸವವನ್ನು ಕೈಬಿಡಬಾರದು. ಚಾಮರಾಜನಗರವು ಜಾನಪದ ಕಲೆಯ ತವರೂರಾಗಿದ್ದು, ಇಲ್ಲಿನ ಕಲಾವಿದರ ಬದುಕು ಹಾಗೂ ಕಲೆಯನ್ನು ಉಳಿಸಲು ದಸರಾ ಮಹೋತ್ಸವ ಆಯೋಜಿಸುವುದು ಅಗತ್ಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಧರಣಿಯಲ್ಲಿ ಮಾತನಾಡಿದ ಜಿಲ್ಲಾ ಕಲಾವಿದರ ಬಳಗದ ಒಕ್ಕೂಟದ ರಂಗಸ್ವಾಮಿ, “ಕಲಾವಿದರ ಸಾಂಸ್ಕೃತಿಕ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯಬಾರದು. ಜಿಲ್ಲಾಡಳಿತ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೂಡಲೇ ದಸರಾ ಮಹೋತ್ಸವ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ಕಲಾವಿದರು ಬಡತನದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಳೆದ ಬಾರಿ ದಸರಾ ನಡೆಯದ ಕಾರಣ ಹಲವಾರು ಕಲಾವಿದರು, ಕಲಾತಂಡಗಳು ಹಾಗೂ ಸಂಘ-ಸಂಸ್ಥೆಗಳು ನಷ್ಟ ಅನುಭವಿಸಿವೆ. ವಿಶೇಷವಾಗಿ ಜಾನಪದ, ಸಾಂಸ್ಕೃತಿಕ ಹಾಗೂ ಮಹಿಳಾ ಕಲಾವಿದರಿಗೆ ದಸರಾ ಪ್ರಮುಖ ವೇದಿಕೆಯಾಗಿದೆ. ಈ ಬಾರಿ ದಸರಾ ನಡೆಸದೆ ಹೋದರೆ ಕಲಾವಿದರ ಬದುಕಿನ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ” ಎಂದು ಹೇಳಿದರು.

ಮೂರು ದಿನ ಕಾಯುತ್ತೇವೆ: ಇವತ್ತು, ನಾಳೆ ಹಾಗೂ ನಾಳಿದ್ದು ಮೂರು ದಿನಗಳ ಕಾಲ ತಾಳ್ಮೆಯಿಂದ ಧರಣಿ ನಡೆಸುತ್ತೇವೆ. ಈ ಅವಧಿಯೊಳಗೆ ದಸರಾ ನಡೆಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಪ್ರತಿಭಟನೆ ನಡೆಸಲು ಕಲಾವಿದರು ಸಂಘಟಿತರಾಗಲಿದ್ದಾರೆ” ಎಂದು ರಂಗಸ್ವಾಮಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಕಲಾವಿದರಿದ್ದು, ಯಾವುದೇ ಪಕ್ಷ ಅಥವಾ ಸಂಘಟನೆಯ ಪರ-ವಿರೋಧವಾಗಿ ಅಲ್ಲದೆ ಕಲಾವಿದರ ಹಕ್ಕು ಹಾಗೂ ಸಾಂಸ್ಕೃತಿಕ ವೇದಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಎಲ್ಲ ಕಲಾವಿದರಿಗೂ ಅವಕಾಶ ನೀಡಿ: ಚಾಮರಾಜನಗರ ದಸರಾ ಕಾರ್ಯಕ್ರಮವನ್ನು ಯಾವುದೇ ನಿರ್ದಿಷ್ಟ ಸಂಘಟನೆಗೆ ಸೀಮಿತಗೊಳಿಸದೆ ಜಿಲ್ಲೆಯ ವಿವಿಧ ಕಲಾತಂಡಗಳು ಹಾಗೂ ಕಲಾವಿದರಿಗೆ ಅವಕಾಶ ನೀಡಬೇಕು. ಕಲಾವಿದರನ್ನು ಕಡೆಗಣಿಸುವ ಬದಲು ಅವರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಲಾವಿದರು ಎಲ್ಲ ಜಾತಿ, ಸಮುದಾಯಗಳಲ್ಲಿದ್ದಾರೆ. ದಸರಾ ಮಹೋತ್ಸವದಲ್ಲಿ ಎಲ್ಲ ಕಲಾವಿದರಿಗೂ ಸಮಾನ ಅವಕಾಶ ಕಲ್ಪಿಸಬೇಕು. ನಮ್ಮ ಸಾಂಸ್ಕೃತಿಕ ಹಕ್ಕನ್ನು ನಮಗೆ ಮರಳಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಿವಶಂಕರ್, ಚಟ್ಟು ಶಿವಣ್ಣ, ಮಹೇಂದ್ರ, ಸಿದ್ದು ಮಡಿವಾಳ, ನಾಗೇಂದ್ರ, ಕೃಷ್ಣಮೂರ್ತಿ, ರಮೇಶ್, ಭಾಗಮ್ಮ, ಮಹದೇವಮ್ಮ, ಪ್ರಕಾಶ್, ಸರೋಜಮ್ಮ ಸೇರಿದಂತೆ ಹಲವು ಕಲಾವಿದರು ಹಾಗೂ ಕಲಾತಂಡಗಳ ಸದಸ್ಯರು ಭಾಗವಹಿಸಿದ್ದರು.

Share this Article
Leave a comment