ಚಾಮರಾಜನಗರ, ಅ.9: ಜಿಲ್ಲೆಯಲ್ಲೂ ದಸರಾ ಮಹೋತ್ಸವ ಆಚರಣೆ ಮಾಡಬೇಕು ಎಂಬ ಯುವ ಕಲಾವಿದರ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ಚಾಮರಾಜನಗರದಲ್ಲೂ ಸಂಭ್ರಮದ ದಸರಾ ಮಹೋತ್ಸವ ಆಚರಣೆಗೆ ಮುಂದಾಗಿದೆ.
ಜಿಲ್ಲಾ ಯುವ ಕಲಾವಿದರ ಬಳಗ ಹಾಗೂ ನೂರಾರು ಸೋಬಾನೆ ಕಲಾವಿದರು ಕಳೆದ ಒಂದು ವಾರದ ಹಿಂದೆ ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಸಂಬಂಧ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದರು. ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯ ವೇಳೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಹೋರಾಟಗಾರರನ್ನು ಮನವೊಲಿಸಲು ಯಶಸ್ವಿಯಾಗಿದ್ದರು. ಆದರೆ ಗುರುವಾರ ಯುವ ಕಲಾವಿದರು ಮತ್ತು ಸೋಬಾನೆ ಕಲಾವಿದರು ಮತ್ತೆ ಹೋರಾಟವನ್ನು ಮುಂದುವರಿಸಿದ್ದರು.
ಜಿಲ್ಲಾಡಳಿತ ಭವನದ ಮುಂಭಾಗ ಹೋರಾಟ ಮುಂದುವರಿಸಿದ್ದ ಕಲಾವಿದರನ್ನು ಜಿಲ್ಲಾಧಿಕಾರಿ ಶ್ರೀರೂಪಾ ಅವರು ಭೇಟಿ ಮಾಡಿ, ದಸರಾ ಮಹೋತ್ಸವ ಆಚರಣೆ ಭರವಸೆಯೊಂದಿಗೆ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದರು.
ಹೋರಾಟಕ್ಕೆ ಮಣಿದ ಸರ್ಕಾರ: ಯುವ ಕಲಾವಿದರು ಹಾಗೂ ಸೋಬಾನೆ ಕಲಾವಿದರ ನಿರಂತರ ಹೋರಾಟದಿಂದ ಎಚ್ಚೆತ್ತುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಸಂಬಂಧ ಇಂದು (ಅ.9) ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಕರೆದಿದ್ದಾರೆ. ಅದರಂತೆ ಚಾಮರಾಜನಗರದಲ್ಲೂ ದಸರಾ ಮಹೋತ್ಸವ ಆಚರಣೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಕಲಾವಿದರ ಹೋರಾಟಕ್ಕೆ ಸಚಿವರು ಹಾಗೂ ಸರ್ಕಾರವೇ ಮಣಿದಂತಾಗಿದ್ದು, ಅರ್ಥಪೂರ್ಣವಾಗಿ ಚಾಮರಾಜನಗರ ದಸರಾ ಮಹೋತ್ಸವ ಆಚರಣೆಯಾಗಲಿ ಎಂದು ಯುವ ಕಲಾವಿದರ ಬಳಗದ ಜಿಲ್ಲಾಧ್ಯಕ್ಷ ಶಿವಶಂಕರ್ ಎನ್.ಚಟ್ಟು ಅವರು “ಜನತಾ ರಾಯಭಾರಿ” ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.