ವಿದ್ಯಾರ್ಥಿಗಳು ನಿರಂತರ ಅಭ್ಯಾಸದಿಂದ ಯಶಸ್ಸು ಸಾಧ್ಯ 

ಮಣಿಕಂಠ ಜನತಾ ರಾಯಭಾರಿ
1 Min Read

*ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ಪುಟ್ಟಗೌರಮ್ಮ ಸಲಹೆ 

*ಮಹಿಳಾ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 

ಚಾಮರಾಜನಗರ, ಅ.12: ಕಾಲೇಜು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ಪುಟ್ಟಗೌರಮ್ಮ ಸಲಹೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಜಿಲ್ಲಾ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ರಾಸಾಯನಶಾಸ್ತ್ರ ವೇದಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪದವಿ ಪೂರ್ವ ಕಾಲೇಜು ಜೀವನ ಎನ್ನುವುದು ಪ್ರತಿಯೊಬ್ಬರ ಬದುಕಿನ ಅತ್ಯಂತ ಸುಂದರ ಮತ್ತು ಮಹತ್ವದ ಘಟ್ಟ. ಇಲ್ಲಿ ಕೇವಲ ಪದವಿಗಾಗಿ ಓದುವುದಷ್ಟೇ ಅಲ್ಲ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಅದ್ಭುತ ಸಮಯ ಇದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ನಡೆಸುವ ಮೂಲಕ ಉತ್ತಮ ಅಂಕಗಳಿಕೆ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.

ಕಳೆದುಹೋದ ಸಮಯ ಮತ್ತೆ ಮರಳಿ ಬರಲ್ಲ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ಇಂದಿನ ಜಗತ್ತಿಗೆ ಜ್ಞಾನದ ಜೊತೆಗೆ ಕೌಶಲ್ಯವೂ ಅತಿ ಮುಖ್ಯ. ನಿಮ್ಮ ಪೋಷಕರು ನಿಮ್ಮ ಮೇಲೆ ಸಾಲು ಸಾಲು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಅವರ ತ್ಯಾಗ ಮತ್ತು ಪರಿಶ್ರಮಕ್ಕೆ ನೀವು ಕೊಡುವ ಅತಿ ದೊಡ್ಡ ಉಡುಗೊರೆ ಎಂದರೆ ನಿಮ್ಮ ಯಶಸ್ಸು. ಕಷ್ಟಪಟ್ಟು ಓದುವುದಲ್ಲ, ಇಷ್ಟಪಟ್ಟು ಓದಿ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಎಚ್.ಪಿ.ನಿರ್ಮಲಾ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಿಯಾ ಶಂಕರ್, ಖಜಾಂಚಿ ಎಚ್.ಎನ್.ಸ್ವಾಮಿ, ಕಾರ್ಯದರ್ಶಿ ತಿಮ್ಮರಾಜು, ಜಿಲ್ಲಾ ರಸಾಯನಶಾಸ್ತ್ರ ವೇದಿಕೆಯ ಅಧ್ಯಕ್ಷ ಪಿ.ಎಸ್.ನಾಗರಾಜು, ಪ್ರಾಂಶುಪಾಲರಾದ ಮಿನ್ನಿ ಜಾರ್ಜ್, ನಂಜಮ್ಮಣ್ಣಿ, ಉಪನ್ಯಾಸಕಿ ಎಂ.ಅಮೃತಾ ಹಾಗೂ ಇತರರು ಹಾಜರಿದ್ದರು.

Share this Article
Leave a comment