ಸಮ್ಮೇಳನ ಆಯೋಜಕರು ಬೌದ್ಧ ಧರ್ಮ ಸ್ವೀಕರಿಸಲಿ-ಪಿ.ಸಂಘಸೇನಾ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ, ಅ.22: ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಆಯೋಜಕರು ಬೌದ್ಧ ಧರ್ಮ ಸ್ವೀಕಾರ ಮಾಡುವ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಹಿರಿಯ ಬೌದ್ಧ ಉಪಾಸಕ ಸಂಘಸೇನಾ ಆಗ್ರಹಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅ.24 ಮತ್ತು 25 ರಂದು ನಡೆಯುತ್ತಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸದ ಮತ್ತು ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದವರು ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಆಗಾಗಿ ಸಮ್ಮೇಳನದ ಆಯೋಜಕರು ಮತ್ತು ಇತರರು ಬೌದ್ಧ ಧರ್ಮ ಸ್ವೀಕಾರ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಂತಾರಾಷ್ಟ್ರೀಯ ಸಮ್ಮೇಳನದ ಮೂಲಕ ಜಾಗತಿಕ ಮಟ್ಟಕ್ಕೆ ಯಾವ ಸಂದೇಶವನ್ನು ರವಾನಿಸಲಾಗುತ್ತದೆ ಎಂಬುದನ್ನು ಆಯೋಜಕರು ಸ್ಪಷ್ಟಪಡಿಸಬೇಕು. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸಮ್ಮೇಳನದಲ್ಲಿ ಧರ್ಮದ ಕುರಿತು ಆಳವಾದ ಅಧ್ಯಯನ ನಡೆಸಿರುವ ಬೌದ್ಧ ಗುರುಗಳು ಮತ್ತು ಭಿಕ್ಕುಗಳಿಗೆ ಅಧ್ಯಕ್ಷತೆ ಹಾಗೂ ಪ್ರಮುಖ ಸ್ಥಾನಮಾನ ನೀಡಬೇಕಿತ್ತು. ಆದರೆ, ಬೌದ್ಧ ಧರ್ಮದ ಗುರುಗಳಿಗೆ ವಿಶೇಷ ಗೌರವ ನೀಡುವ ಬದಲು ಅವರ ಭಾವಚಿತ್ರಗಳೊಂದಿಗೆ ಆಯೋಜಕರ ಭಾವಚಿತ್ರಗಳನ್ನೂ ಸಮಾನವಾಗಿ ಪ್ರದರ್ಶಿಸಿರುವುದು ವಿಷಾದನೀಯ ಎಂದು ಹೇಳಿದರು.

ಬೌದ್ಧ ಸಮ್ಮೇಳನದ ಆಯೋಜಕರಾದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಧಮ್ಮದೀಕ್ಷೆ ಪಡೆದು ಅದರ ತತ್ವಗಳನ್ನು ಜೀವನದಲ್ಲಿ ಅನುಸರಿಸಬೇಕು. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಧಮ್ಮದ ಸಂದೇಶವನ್ನು ವ್ಯಾಪಕವಾಗಿ ಹರಡಬೇಕು ಎಂದು ಮನವಿ ಮಾಡಿದರು.

ರಾಜಕೀಯ ಹಿತಾಸಕ್ತಿಗಾಗಿ ಸಮ್ಮೇಳನ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ರಾಜಕೀಯ ಹಿತಾಸಕ್ತಿಗಾಗಿ ಆಯೋಜನೆ ಮಾಡಲಾಗಿದೆ ಎಂದು ಪಿ.ಸಂಘಸೇನಾ ಆರೋಪ ಮಾಡಿದರು. ನಮ್ಮ ನಡುವೆ ಇರುವ ಮನುವಾದಿ ದಲಿತರು ಸಮ್ಮೇಳನವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಬೋಧಿಸಿದ ಪ್ರತಿಜ್ಞಾ ವಿಧಿಯನ್ನು ಅನುಸರಿಸುವವರು ಮಾತ್ರ ನಿಜವಾದ ಬೌದ್ಧರಾಗುತ್ತಾರೆ. ಅದನ್ನು ಹೊರತುಪಡಿಸಿ ಮಾಡುವ ಸಮ್ಮೇಳನಗಳು ರಾಜಕೀಯ ಹಿತಾಸಕ್ತಿಯಿಂದ ಕೂಡಿರುತ್ತದೆ. ಜನರು ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.

Share this Article
Leave a comment