ಚಾಮರಾಜನಗರ,ಅ.23: ಜಾನಪದ ಕಲೆಗಳ ತವರೂರು, ಗಡಿ ಜಿಲ್ಲೆ ಚಾಮರಾಜನಗರ ಈಗ ಜಾಗತಿಕ ಧಮ್ಮ ನೆಲವಾಗಿ ಮಾರ್ಪಡಲು ಸಜ್ಜಾಗಿದೆ.
ಹೌದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 24 ಮತ್ತು 25 ರಂದು ಎರಡು ದಿನಗಳ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಅದ್ಧೂರಿಯಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕಳೆದ ವರ್ಷ ಮೈಸೂರಿನಲ್ಲಿ ನಡೆದ ಮೊದಲ ಸಮ್ಮೇಳನದ ಯಶಸ್ಸಿನ ನಂತರ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಧಮ್ಮ ಜ್ಯೋತಿಯನ್ನು ಸ್ವೀಕರಿಸಿದ ಚಾಮರಾಜನಗರದಲ್ಲಿ ಎರಡನೇ ಆವೃತ್ತಿ ನಡೆಯುತ್ತಿದೆ.
ಅ.24 ಮತ್ತು 25 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬೌದ್ಧ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಬೌದ್ಧ ಬಿಕ್ಕುಗಳು, ಉಪಾಸಕರು, ಅನುಯಾಯಿಗಳು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಅ.24 ಮೊದಲ ದಿನ ಬೆಳಿಗ್ಗೆ 7 ಗಂಟೆಗೆ ರಾಮಸಮುದ್ರದ ಅಂಬೇಡ್ಕರ್ ಪುತ್ಥಳಿ ಬಳಿ “ಧಮ್ಮ ನಡಿಗೆ” ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡುವರು. ಬೆಳಿಗ್ಗೆ 9 ಗಂಟೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಧಮ್ಮ ಧ್ವಜಾರೋಹಣ ಮಾಡುವರು. ಬೆಳಿಗ್ಗೆ 11:30 ಗಂಟೆಗೆ ಸಮ್ಮೇಳನವನ್ನು ರಾಜ್ಯಸಭೆ ವಿಪಕ್ಷ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟನೆ ಮಾಡುವರು. ಶ್ರೀಲಂಕಾದ ಕೊಲಂಬೊ ವಿವಿಯ ಶೀಲವಂಶ ಮಹಾಥೆರೋ ಬಂತೇಜಿ ಸಾನ್ನಿಧ್ಯ ವಹಿಸುವರು. ಬೋಧಿರತ್ನ ಬಂತೇಜಿ ಅವರು ಜ್ಯೋತಿ ಬೆಳಗುವರು.
ಮುಖ್ಯ ಅತಿಥಿಗಳಾಗಿ ಭೀಮರಾವ್ ಯಶವಂತರಾವ್ ಅಂಬೇಡ್ಕರ್ (ಅಂಬೇಡ್ಕರ್ ಮೊಮ್ಮಗ), ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಇತರರು ಭಾಗವಹಿಸುವರು.

ಅ.25 ರ ಬೆಳಿಗ್ಗೆ 11:30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4:30ಕ್ಕೆ ಸಮಾರೋಪ ಸಮಾರಂಭವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸಮ್ಮೇಳನದ ವಿಶೇಷತೆ:
ಎರಡು ದಿನಗಳ ಕಾಲ ನಡೆಯುವ ಬೌದ್ಧ ಸಮ್ಮೇಳನದಲ್ಲಿ ಬುದ್ಧನ ಚಿಂತನೆ, ಬುದ್ಧ ಮತ್ತು ಬಹುತ್ವ, ಸಮಾನತೆ, ಕರುಣೆ, ಸಾಮಾಜಿಕ ನ್ಯಾಯ ಕುರಿತು ವಿಚಾರಗೋಷ್ಠಿ, ಸಂವಾದ, ಧಮ್ಮ ಕವಿಗೋಷ್ಠಿ, ಮಕ್ಕಳ ಮೈತ್ರಿ ಕಾರ್ಯಕ್ರಮ, ಮಹಿಳಾ ಮತ್ತು ಯುವ ದುಂಡುಮೇಜಿನ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಮಳಿಗೆ, ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಹೊಸದೊಂದು ಇತಿಹಾಸ ಬರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.