ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ, ಅ.24: ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಬೆಳ್ಳಂಬೆಳಗ್ಗೆಯೇ ಆಕಾಶ ಸಂಪೂರ್ಣ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ರಸ್ತೆಗಿಳಿಯುವ ಜನರಿಗೆ ತುಂತುರು ಮಳೆ ಸ್ವಾಗತ ಕೋರಿದೆ. ವೀಕೆಂಡ್ ಆರಂಭದಲ್ಲೇ ವರುಣನ ಈ ಜಿಟಿ ಜಿಟಿ ಸಿಂಚನವು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಹಿತವಾದ ವಾತಾವರಣ ನೀಡಿದರೇ, ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟುಮಾಡಿದೆ.

ರೈತರಲ್ಲಿ ಮೂಡಿದ ಹರ್ಷ: ಮುಂಗಾರು ಮತ್ತು ಹಿಂಗಾರು ಅವಧಿಯ ಬೆಳೆಗಳ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಈ ಮುಂಜಾನೆಯ ಜಿಟಿ ಜಿಟಿ ಮಳೆ ಹೊಸ ಭರವಸೆ ತಂದಿದೆ. ಜಮೀನುಗಳಲ್ಲಿ ಬಿತ್ತನೆ ಕಾರ್ಯ ಹಾಗೂ ಬೆಳೆಗಳಿಗೆ ಈ ಹದವಾದ ಮಳೆ ಪೂರಕವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಅಸ್ತವ್ಯಸ್ತಗೊಂಡ ಮುಂಜಾನೆಯ ಜನಜೀವನ: ಇನ್ನೊಂದೆಡೆ, ಬೆಳಗ್ಗಿನ ಜಾವ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ದಿನಸಿ, ತರಕಾರಿ ಮಾರುಕಟ್ಟೆ ವ್ಯಾಪಾರಿಗಳಿಗೆ ಮತ್ತು ಮುಂಜಾನೆ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ಹೊರಟ ಸಾರ್ವಜನಿಕರಿಗೆ ಕೊಂಚ ಅಡಚಣೆಯುಂಟಾಯಿತು. ಹವಾಮಾನ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಇನ್ನು ಕೆಲವು ಗಂಟೆಗಳ ಕಾಲ ಇದೇ ರೀತಿಯ ಮೋಡ ಕವಿದ ವಾತಾವರಣ ಹಾಗೂ ಹಗುರವಾದ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಬೌದ್ಧ ಸಮ್ಮೇಳನಕ್ಕೆ ಕಿರಿಕಿರಿ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ನಿರಂತರವಾಗಿ ಸುರಿಯುತ್ತಿರುವ ಮಳೆರಾಯ ಕೊಂಚ ತೊಡಕು ಉಂಟುಮಾಡಿದೆ. ಬೆಳಿಗ್ಗೆಯೇ ನಗರದ ರಾಮಸಮುದ್ರ ಬಡಾವಣೆಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಶಾಂತಿಯ ನಡಿಗೆ ಜಾಥಾ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ಜಾಥಾ ತಡವಾಗಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಮ್ಮೇಳನಕ್ಕೆ ಬರುವ ಸಾರ್ವಜನಿಕರಿಗೂ ಜಿಟಿ ಮಳೆ ಕಿರಿಕಿರಿಯನ್ನು ಉಂಟುಮಾಡಿದೆ.

Share this Article
Leave a comment