ಯಳಂದೂರು:ತಾಲ್ಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮನೆಗಳ ಮುಂದೆ ಚಿರತೆಯು ಸಂಚರಿಸುವ ಚಿತ್ರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ

ಬೂದಿತಿಟ್ಟು ಸುತ್ತಮುತ್ತಲಿನ ಹೊಲಗದ್ದೆಗಳ ಸಮೀಪ ರಾತ್ರಿ 11 ಗಂಟೆಯ ನಂತರ ಚಿರತೆ ಕಾಣಿಸಿಕೊಳ್ಳುತ್ತಿದೆ. ಮದ್ದೂರು ಸಮೀಪದ ಸುವರ್ಣಾವತಿ ನದಿ ದಂಡೆಯುದ್ದಕ್ಕೂ ಚಿರತೆ ಸಂಚರಿಸುತ್ತಿರುವುದರಿಂದ ಜನರು ಹಾಗೂ ಜಾನುವಾರುಗಳ ಸುರಕ್ಷತೆ ಬಗ್ಗೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಮಾಂಬಳ್ಳಿ, ಮದ್ದೂರು, ಯಳಂದೂರು ಹಾಗೂ ಅಂಬಳೆ ಸುತ್ತ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಕೃಷಿಕರು ಮಾಹಿತಿ ನೀಡಿದ್ದು, ಚಿರತೆಯ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ. ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿದೆ’ ಎಂದು ಅರಣ್ಯ ಇಲಾಖೆಯ ಎಆರ್‌ಎಫ್‌ಒ ಮಧು ತಿಳಿಸಿದರು.