*ಆರ್ಡಿಪಿಆರ್ ಸಚಿವರಿಗೆ ಪತ್ರಬರೆದು ಮನವಿ
*ಚಾಮರಾಜನಗರ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗ್ರಹ
ಚಾಮರಾಜನಗರ, ಅ.27 ; ಚಾಮರಾಜನಗರ ವಿಶ್ವವಿದ್ಯಾಲಯದ ಸುವರ್ಣ ಗಂಗೋತ್ರಿ ಕ್ಯಾಂಪಸ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇಡರಪುರದಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ಚಾಮರಾಜನಗರ, ನಂಜನಗೂಡು, ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಂದುಹೋಗುತ್ತಾರೆ.

ವಿಶ್ವವಿದ್ಯಾಲಯದಿಂದ ನಂಜನಗೂಡು ಕಡೆಗೆ ಹೋಗಲು ಇರುವ ತಂಗುದಾಣವು ಸೂರಿಲ್ಲದೆ ಶಿಥಿಲಾವಸ್ಥೆ ತಲುಪಿದೆ. ಇದರಿಂದಾಗಿ ಚಾಮರಾಜನಗರ ಮತ್ತು ನಂಜನಗೂಡು ಎರಡೂ ಕಡೆಗೆ ಹೋಗುವ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಸ್ ಗಳಿಗೆ ಕಾಯುತ್ತಾ ಬಿಸಿಲಿನಲ್ಲಿ ನಿಂತಿರುತ್ತಾರೆ ಎಂದು ಮನವರಿಕೆ ಮಾಡಿದ್ದಾರೆ.

ಹಾಗೆಯೇ ಜಿಲ್ಲೆಯ ವೆಂಕಟಯ್ಯನ ಛತ್ರ ಗ್ರಾಮದಲ್ಲಿಯೂ ಮೂಲಭೂತ ಸೌಲಭ್ಯವಾದ ಬಸ್ ತಂಗುದಾಣ ಇರುವುದಿಲ್ಲ. ತಾವುಗಳು ರಾಜ್ಯದಾದ್ಯಂತ 1000 ಬಸ್ ತಂಗುದಾಣಗಳನ್ನು ನಿರ್ಮಿಸಹೊರಟಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಚಾಮರಾಜನಗರದ ಈ ಭಾಗಗಳಿಗೆ ಬಸ್ ತಂಗುದಾಣಗಳನ್ನು ನಿರ್ಮಿಸುವುದನ್ನು ಆದ್ಯತೆ ಮೇರೆಗೆ ಪರಿಗಣಿಸಿಬೇಕು ಎಂದು ಕೋರಿದ್ದಾರೆ.