ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿ ವಿತರಣೆ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಅಕ್ಟೋಬರ್ 27:  ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಪ್ರಕಟಣೆಯ ಪ್ರತಿಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿತರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಸಂಬಂಧ ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಅಂತಿಮ ಮತದಾರರ ಪಟ್ಟಿಯ ಮತಗಟ್ಟೆವಾರು ವಿವರಗಳನ್ನು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿ ಪ್ರಕಾರ ಒಟ್ಟು 7,91,949 ಮತದಾರರಿದ್ದರು. ಒಟ್ಟಾರೆ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 8,00,858 ಮತದಾರರಿದ್ದಾರೆ ಎಂದರು.

ಜಿಲ್ಲೆಯಲ್ಲಿ 2026ರ ಜೂನ್ 30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭದಿಂದ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯವರೆಗೂ ನೊಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಗತ್ಯ ಸಲಹೆ, ಅಭಿಪ್ರಾಯಗಳನ್ನು ನೀಡಿ ಅಂತಿಮ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ತಯಾರಿಸಲು ನೆರವಾಗಿದ್ದೀರಿ, ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಜಿಲ್ಲಾಧಿಕಾರಿಯವರು ಹೇಳಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೂ ಮೊದಲು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 983 ಮತಗಟ್ಟೆಗಳಿದ್ದವು. ಈ ಪೈಕಿ 1200ಕ್ಕಿಂತ ಹೆಚ್ಚಿನ ಮತದಾರರಿರುವ ಮತಗಟ್ಟೆಗಳನ್ನು ಪುನರ್‍ವಿಂಗಡಣೆ ಮಾಡಿ ಹೆಚ್ಚುವರಿಯಾಗಿ 47 ಮತಗಟ್ಟೆಗಳನ್ನು ಸ್ಥಾಪಿಸಿ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು 1030ಕ್ಕೆ ಹೆಚ್ಚಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ 100 ವರ್ಷ ತುಂಬಿದ 151 ಮಂದಿ ಶತಾಯುಷಿಗಳಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ 18 ವರ್ಷ ತುಂಬಿದ 12,399 ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಸೇರ್ಪಡೆಯಾಗಿರುವ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ಮುದ್ರಿಸಿ ನೀಡಲಾಗುವುದು. ಭಾರತ ಚುನಾವಣಾ ಆಯೋಗದ ಈ ಮಹತ್ತರ ಕಾರ್ಯಕ್ಕೆ ಸಹಕರಿಸಿದ ಜಿಲ್ಲೆಯ ನಾಗರಿಕರನ್ನು ಜಿಲ್ಲಾಡಳಿತ ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಹೇಳಿದರು.

ಚುನಾವಣಾ ಶಿರಸ್ತೇದಾರರಾದ ನಿತ್ಯಶ್ರೀ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಚ್.ಎಸ್. ತೋಂಟದಾರ್ಯಸ್ವಾಮಿ, ಎಸ್. ಬಾಲಸುಬ್ರಮಣ್ಯ, ಎಂ. ಚಿಕ್ಕಮಹದೇವು, ಎಸ್. ರಾಮಚಂದ್ರ, ಬ.ಮ. ಕೃಷ್ಣಮೂರ್ತಿ, ಶಕುಂತಲ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Share this Article
Leave a comment