ಚಾಮರಾಜನಗರ: ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ನೀಲಾದೇವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಲವಾರು ವೈದ್ಯಾಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ನೀಲಾದೇವಿ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನೇಮಕ ಮಾಡಿದೆ.
ಈ ಹಿಂದೆ ಡಿಎಚ್ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಚಿದಂಬರಂ ಅವರು ವರ್ಗಾವಣೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಡಾ.ನೀಲಾದೇವಿ ಅವರನ್ನು ನೇಮಕ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ವಿ.ಅಕ್ಕಮಹಾದೇವಿ ಅವರು ಆದೇಶ ಹೊರಡಿಸಿದ್ದಾರೆ.
25 ವರ್ಷಗಳ ನಿರಂತರ ಸೇವೆ: ಡಾ.ನೀಲಾದೇವಿ ಅವರು ಕಳೆದ 25 ವರ್ಷಗಳಿಂದ ವೈದ್ಯರಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಸೇವೆ ಸಲ್ಲಿಸಿರುವ ಅವರು, ಜನಪರ ವೈದ್ಯರಾಗಿದ್ದರು. ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನೇಮಕ ಮಾಡಿರುವುದಕ್ಕೆ ಹಲವಾರು ಅಭಿನಂದನೆ ಸಲ್ಲಿಸಿದ್ದಾರೆ.