ಬೆಂಗಳೂರು: 2025-26 ರ ಆಯವ್ಯಯ ಘೋಷಣೆಯಂತೆ ಕರ್ನಾಟಕ ಸರ್ಕಾರವು ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡಿ, ಹೆಚ್ಚುವರಿ ರಾಜಸ್ವ ಸಂಗ್ರಹಣೆ ಮಾಡುವ ನಿರೀಕ್ಷಿಸಿದೆ ಎಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ,ಅಬಕಾರಿ ಇಲಾಖೆಯು
ಅಬಕಾರಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತಂದು, ಒಟ್ಟಾರೆ 579 ಸನ್ನದುಗಳನ್ನು ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಸ್ಥಗಿತಗೊಂಡಿರುವ ಮತ್ತು ಹಂಚಿಕೆಯಾಗದೇ ಇರುವ ಸಿಎಲ್-2 ಮತ್ತು ಸಿಎಲ್(11-ಸಿ) ಸನ್ನದುಗಳನ್ನು ಸಿಎಲ್(2-ಎ) ಎಂದು ಮತ್ತು ಸ್ಥಗಿತಗೊಂಡಿರುವ ಸಿಎಲ್-9 ಸನ್ನದುಗಳನ್ನು ಸಿಎಲ್(9-ಎ) ಎಂದು ವರ್ಗೀಕರಿಸಿ 569 ಸನ್ನದುಗಳ ಪೈಕಿ ಹರಾಜು ಪ್ರಕ್ರಿಯೆಗೆ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳನ್ನು ಇ-ಹರಾಜಿಗೆ ಪ್ರಕಟಿಸಲಾಗಿದೆ.
ಸರ್ಕಾರವು ಸಿಎಲ್(2-ಎ) ಮತ್ತು ಸಿಎಲ್(9-ಎ) ಸನ್ನದುಗಳನ್ನು ಇ-ಹರಾಜಿನಲ್ಲಿ ಹರಾಜು ಮಾಡಲಿದೆ.ವಿವಿಧ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಬಿಡ್ದಾರರ ನೋಂದಣಿಯು ಜುಲೈ 3 ರಿಂದ ಪ್ರಾರಂಭವಾಗಿದ್ದು, ನೇರ ಹರಾಜು (Live Bidding) ಜುಲೈ 24 ರಿಂದ 31ರವರೆಗೆ ಜರುಗಲಿದೆ.
ಇ-ಹರಾಜು ಅಧಿಸೂಚನೆ ಮತ್ತು ಬಿಡ್ಡಿಂಗ್ಗಾಗಿ ನೋಂದಾಯಿಸಿಕೊಳ್ಳುವ ವಿಧಾನವು ಅಬಕಾರಿ ಇಲಾಖೆಯ https://stateexcise.karnataka.gov.in ರಲ್ಲಿ ಮತ್ತು MSTC ಇ-ಹರಾಜು ಪೋರ್ಟಲ್ https://www.mstcecommerce.com. ನಲ್ಲಿ ಲಭ್ಯವಿರುತ್ತದೆ ಎಂದು ಅಬಕಾರಿ ಆಯುಕ್ತರಾದ ಆರ್.ವೆಂಕಟೇಶಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.